ನವದೆಹಲಿ, ಸೆ.22 (DaijiworldNews/AK): ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಸಾಮಾನ್ಯವಾಗಿ ದೆಹಲಿಯ ವಿಜ್ಞಾನ ಭವನ ಸಭಾಂಗಣಗಳಲ್ಲಿ ಕೊಡುವ ರೂಢಿ ದಶಕಗಳಿಂದ ನಡೆದುಕೊಂಡು ಬರುತ್ತಿದೆ. ಇಲ್ಲೇ ರಾಷ್ಟ್ರಪತಿಯವರು ಆ ವರ್ಷದ ಅತ್ಯುತ್ತಮ ಸಿನಿಮಾ, ನಟ-ನಟಿಯರು, ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ವಿತರಿಸುತ್ತಾ ಬಂದಿದ್ದರು. ಆದರೆ ಈ ಪದ್ಧತಿಗೆ ಕೊನೆ ಹಾಡಲು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ನಿರ್ಧರಿಸಿದೆ.

ಸಭಾಂಗಣದ ನಾಲ್ಕು ಗೋಡೆಗಳ ನಡುವೆ ಮಾಡಲಾಗುತ್ತಿದ್ದ ಈ ಮಹತ್ವದ ಕಾರ್ಯವನ್ನು ಜನರ ನಡುವೆ ತೆಗೆದುಕೊಂಡು ಹೋಗಲು ಇಲಾಖೆ ನಿರ್ಧರಿಸಿದ್ದು, ಮೊದಲ ಹೆಜ್ಜೆಯಾಗಿ ಈ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ‘ಏಕತಾ ನಗರ’ದಲ್ಲಿ ಮಾಡುವ ನಿರ್ಧಾರ ಪ್ರಕಟಿಸಲಾಗಿದೆ.
ಈ ಕುರಿತು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಹೇಳಿಕೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರೇರಣೆಯಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದಿರುವ ಅವರು, ಸಿನಿಮಾ ಮತ್ತು ಪ್ರವಾಸೋದ್ಯಮವನ್ನು ಒಟ್ಟಿಗೆ ಜೋಡಿಸುವ ಮೂಲಕ ಪ್ರವಾಸಿ ತಾಣಗಳಿಗೆ ವ್ಯಾಪಕ ಉತ್ತೇಜನ ನೀಡಲಾಗುವುದು, ವಿಶ್ವಪ್ರಸಿದ್ಧ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಇರುವ ಏಕತಾ ನಗರದಲ್ಲಿ ಈ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ನಡೆಯಲಿದ್ದು, ಸ್ವತಃ ರಾಷ್ಟ್ರಪತಿಗಳು ಹಾಗೂ ದೇಶದ ನಟ-ನಟಿಯರು ಭಾಗವಹಿಸಲಿದ್ದಾರೆ ಎಂದಿದ್ದಾರೆ.
ಈ ವರ್ಷದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ಏಕತಾ ನಗರದಲ್ಲಿ ಇಂದೇ (ಸೆಪ್ಟೆಂಬರ್ 22) ನಡೆಯಲಿದೆ. ಮಧ್ಯಾಹ್ನ 2:30ಗೆ ಕಾರ್ಯಕ್ರಮ ಪ್ರಾರಂಭ ಆಗಲಿದೆ. ಈ ಕಾರ್ಯಕ್ರಮದಲ್ಲಿ ನಟ ಅನಂತ್ ನಾಗ್ ಅವರಿಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯ ಮೂಲಕ ಗೌರವಿಸಲಾಗುತ್ತದೆ. ಜೊತೆಗೆ ನಟರಾದ ಮಮ್ಮುಟಿ, ಕಾರ್ತಿಕ್ ಆರ್ಯನ್, ನಟಿ ಯಾಮಿ ಗೌತಮ್ ಇನ್ನೂ ಹಲವರು ಪ್ರಶಸ್ತಿಗಳನ್ನು ಸ್ವೀಕಾರ ಮಾಡಲಿದ್ದಾರೆ.