ಚೆನ್ನೈ, ಸೆ.22 (DaijiworldNews/TA): ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಹಿರಿಯ ನಟಿಯರಾದ ರಾಧಾ ಮತ್ತು ಅಂಬಿಕಾ ಇದೀಗ ಹಣಕಾಸು ವಿಚಾರಕ್ಕೆ ಸಂಬಂಧಿಸಿದ ವಿವಾದದಲ್ಲಿ ಸಿಲುಕಿದ್ದಾರೆ. ತಮ್ಮ ಸಹೋದರಿ ಅಂಬಿಕಾ ಹಾಗೂ ಸಹೋದರನ ವಿರುದ್ಧ ನಟಿ ರಾಧಾ ಅವರು ಚೆನ್ನೈ ಪೊಲೀಸರಿಗೆ ದೂರು ನೀಡಿದ್ದು, ಸುಮಾರು 50 ಕೋಟಿ ರೂಪಾಯಿ ಮೌಲ್ಯದ ವಂಚನೆಗೆ ಯತ್ನಿಸಲಾಗಿದೆ ಎಂದು ಆರೋಪಿಸಿದ್ದಾರೆ. ರಾಧಾ ಅವರು ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಉದ್ಯಮದ ಉದ್ದೇಶಕ್ಕಾಗಿ ತಮ್ಮ ಚೆನ್ನೈ ನಿವಾಸದಲ್ಲಿ ಕೆಲವು ಖಾಲಿ ಚೆಕ್ಗಳಿಗೆ ಸಹಿ ಮಾಡಿ ಇಟ್ಟುಕೊಂಡಿದ್ದರು. ಆದರೆ ತಮ್ಮ ಅನುಮತಿಯಿಲ್ಲದೆ ಆ ಚೆಕ್ಗಳನ್ನು ಅಂಬಿಕಾ ಹಾಗೂ ಸಹೋದರರು ಬಳಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ತಮ್ಮ ಹಳೆಯ ಚೆಕ್ಗಳನ್ನು ಬಳಸಿಕೊಂಡು 11 ಲಕ್ಷ, 23 ಕೋಟಿ, 13.17 ಕೋಟಿ, 7 ಕೋಟಿ ಹಾಗೂ 1.9 ಕೋಟಿ ರೂಪಾಯಿ ಮೊತ್ತವನ್ನು ಪಡೆಯಲು ಯತ್ನಿಸಲಾಗಿದೆ ಎಂದು ರಾಧಾ ದೂರಿನಲ್ಲಿ ತಿಳಿಸಿದ್ದಾರೆ. ಈ ಚೆಕ್ಗಳನ್ನು ತಾವು ಅಂಬಿಕಾ ಅವರಿಗೆ ನೀಡಿರಲಿಲ್ಲ ಎಂದು ರಾಧಾ ಹೇಳಿದ್ದಾರೆ. ಅಲ್ಲದೆ, ತಮ್ಮ ಹಾಗೂ ಸಹೋದರಿಯ ನಡುವೆ ಯಾವುದೇ ಹಣಕಾಸಿನ ವ್ಯವಹಾರವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಚೆಕ್ಗಳ ಮೂಲಕ ಹಣ ಪಡೆಯಲು ಯತ್ನಿಸಿರುವ ವಿಷಯವನ್ನು ಬ್ಯಾಂಕ್ ಅಧಿಕಾರಿಗಳು ತಮ್ಮ ಗಮನಕ್ಕೆ ತಂದ ಬಳಿಕ, ಯಾವುದೇ ಚೆಕ್ಗಳನ್ನು ನಗದೀಕರಿಸದಂತೆ ಬ್ಯಾಂಕ್ಗೆ ಸೂಚಿಸಿದ್ದಾಗಿ ರಾಧಾ ತಿಳಿಸಿದ್ದಾರೆ. ಇದೇ ವೇಳೆ, ತಮ್ಮ ಹಾಗೂ ಅಂಬಿಕಾ ನಡುವೆ ಮನೆ ಮತ್ತು ಮನೆಯಲ್ಲಿರುವ ವಸ್ತುಗಳಿಗೆ ಸಂಬಂಧಿಸಿದಂತೆ ವಿವಾದವಿದೆ ಎಂದೂ ರಾಧಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ರಾಧಾ ಮಾಡಿರುವ ಆರೋಪಗಳನ್ನು ನಟಿ ಅಂಬಿಕಾ ತಳ್ಳಿಹಾಕಿದ್ದಾರೆ. ಮನೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಆ ಚೆಕ್ಗಳನ್ನು ತಮಗೆ ನೀಡಲಾಗಿತ್ತು ಎಂದು ಅಂಬಿಕಾ ಹೇಳಿದ್ದಾರೆ. ಹೀಗಾಗಿ ಸಹೋದರಿಯರಾದ ರಾಧಾ ಮತ್ತು ಅಂಬಿಕಾ ನಡುವಿನ ಹಣಕಾಸು ಹಾಗೂ ಆಸ್ತಿ ವಿವಾದ ಇದೀಗ ಪೊಲೀಸ್ ತನಿಖೆಯ ಹಂತದಲ್ಲಿದೆ. ದೂರು ಸ್ವೀಕರಿಸಿರುವ ಚೆನ್ನೈ ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದು, ಚೆಕ್ಗಳ ಬಳಕೆ, ಹಣಕಾಸಿನ ವ್ಯವಹಾರ ಹಾಗೂ ಮನೆಗೆ ಸಂಬಂಧಿಸಿದ ವಿವಾದದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.
ಅಂಬಿಕಾ ಮತ್ತು ರಾಧಾ ಇಬ್ಬರೂ ದಕ್ಷಿಣ ಭಾರತದ ಚಿತ್ರರಂಗದ ಜನಪ್ರಿಯ ಹಿರಿಯ ನಟಿಯರು. ಅಂಬಿಕಾ ಅವರು ಕನ್ನಡದ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ವರನಟ ಡಾ. ರಾಜ್ಕುಮಾರ್ ಅವರೊಂದಿಗೆ ‘ಚಲಿಸುವ ಮೋಡಗಳು’, ‘ಎರಡು ನಕ್ಷತ್ರಗಳು’, ‘ಅಪೂರ್ವ ಸಂಗಮ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಇನ್ನು ನಟಿ ರಾಧಾ ಕೂಡ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ರವಿಚಂದ್ರನ್ ಅವರೊಂದಿಗೆ ‘ಸಾವಿರ ಸುಳ್ಳು’, ‘ದಿಗ್ವಿಜಯ’, ‘ರಣಚಂಡಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವ ಈ ಇಬ್ಬರು ಸಹೋದರಿಯರ ನಡುವಿನ ಹಣಕಾಸು ಮತ್ತು ಆಸ್ತಿ ವಿವಾದ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನಿಖೆಯ ಬಳಿಕ ಪ್ರಕರಣದ ಮುಂದಿನ ಬೆಳವಣಿಗೆ ಏನೆಂಬುದು ತಿಳಿದುಬರಲಿದೆ.