ಮಂಗಳೂರು, ಸೆ 19 (Daijiworld News/RD): ಮಂಗಳೂರು ಮೂಲದ ಕನ್ನಡ ಚಲನಚಿತ್ರ ’ದಾಮಾಯಣ’ ಓಣಂ ಹಬ್ಬದ ದಿನವಾದ ಸೆಪ್ಟೆಂಬರ್ 11ರ ಸಂಜೆ ತನ್ನ ಟೀಸರ್ನ್ನು ಬಿಡುಗಡೆ ಮಾಡಿದೆ. ಟೀಸರ್ ಸಧ್ಯದಲ್ಲಿ ’ಲಹರಿ ಮ್ಯೂಸಿಕ್’ ನ ಯೂಟ್ಯೂಬ್ ಚ್ಯಾನೆಲ್ನಲ್ಲಿ ಲಭ್ಯವಿದೆ. ಒಂದುವರೆ ನಿಮಿಷದ ಟೀಸರ್ನಲ್ಲಿ ದಾಮೋದರ ತನ್ನ ಪರಿಚಯ ಮಾಡಿಕೊಳ್ಳುತ್ತಾನೆ. ಟೀಸರ್ ದಾಮೋದರನ ಹಾಸ್ಯಾಸ್ಪದ ವ್ಯಕ್ತಿತ್ವದಿಂದಲೇ ಸುದ್ದಿಯಲ್ಲಿದೆ. ದಾಮೋದರನ ಪಾತ್ರವನ್ನು ಸ್ವತಃ ಚಿತ್ರದ ನಿರ್ದೇಶಕ ಶ್ರೀಮುಖ ನಿರ್ವಹಿಸಿದ್ದಾರೆ.
“FROM THE MAKERS OF NO OTHER FILMS”ಎನ್ನುವ ಹಾಸ್ಯಮಯ ಶೀರ್ಷಿಕೆಯಿಂದ ಶುರುವಾಗುವ ಟೀಸರ್ನಲ್ಲೆಲ್ಲೂ- ಇದು ಹೊಸಬರ ಚಿತ್ರ ಎಂದೆನಿಸುವುದಿಲ್ಲ. ಮಂಗಳೂರಿನ ಸೊಗಡಿನ ಕನ್ನಡದಲ್ಲಿ ಮಾತನಾಡುವ ಯುವಕ ದಾಮೋದರ ಪುತ್ತೂರಿನವನಂತೆ.
ದಾಮೋದರನಿಗೆ ತಾನೊಬ್ಬ ಪ್ರತಿಭಾವಂತ ಎನ್ನುವ ಹೆಮ್ಮೆ. ಆದರೆ ಅವನ ಪ್ರತಿಭೆಗೆ ಎಟುಕಿದ್ದು ಮನೆಯ ಅಂಗಳದಿಂದ ಅಡಿಕೆ ಕದಿಯುವ ಹಾಗೂ ಟಿಕ್-ಟಾಕ್ನಲ್ಲಿ ಹಾಡುವ ಚಾಳಿಗಳು. ದಾಮೋದರನ ತಂದೆ ಕೃಷಿಕ, ತಾಯಿ ಗೃಹಿಣಿ. ದಾಮೋದರನಿಗೆ ಮಾತ್ರ- ತಾನು ಪೇಟೆಗೆ ಹೋಗಿ ಹೆಸರು ಮಾಡಬೇಕು ಎನ್ನುವ ಬಯಕೆ.ಅವನ ವ್ಯಕ್ತಿತ್ವವೇ ಟೀಸರ್ನ ಪ್ರಮುಖ ಅಂಶ. ದಾಮೋದರ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಆಗಿ ಹೆಸರು ಮಾಡಿದ ಹಲವರನ್ನು ನೆನಪಿಸುತ್ತಾನೆ. ಟೀಸರ್ ಮೂಲಕ ತಂಡವು - ’ಇದು ಒಂದು ವಿಷಯಾಧಾರಿತ ಚಿತ್ರ’ ಎಂದು ತಿಳಿಸುವಲ್ಲಿ ಯಶಸ್ವಿಯಾಗಿದೆ.
ಟೀಸರ್ನಲ್ಲಿನ ಸನ್ನಿವೇಷಗಳಿಗೆ ಕೀರ್ತನ್ ಬಾಳಿಲ ಅವರ ಮ್ಯೂಸಿಕ್ ’ಮ್ಯಾಜಿಕಲ್ ಟಚ್’ ನೀಡಿದೆ. ಛಾಯಾಗ್ರಾಹಕ ಸಿದ್ದು ಜಿ. ಎಸ್., ಸಂಕಲನಗಾರ ಕಾರ್ತಿಕ್ ಕೆ. ಎಮ್., ಕಲರಿಸ್ಟ್ ಕಾರ್ತಿಕ್ ಮುರಲಿ ಹಾಗೂ ವಿ.ಎಫ್.ಎಕ್ಸ್. ಕಲಾವಿದ ಗುರುರಾಜ್ ತಮ್ಮ ಕೈಚಳಕ ತೋರಿಸಿದ್ದಾರೆ. ಟೀಸರ್ನಲ್ಲಿ ಬರುವ ಪ್ರತಿ ಪಾತ್ರಗಳೂ ಹೊಸ ಮುಖಗಳೇ ಆಗಿವೆ. ಪ್ರತಿ ಪಾತ್ರಗಳೂ ಸಹಜ ನಿರ್ವಹಣೆ ಮಾಡಿದ್ದಾರೆ.