ಚಿತ್ರದುರ್ಗ, ಅ.14 (DaijiworldNews/AA): ತಾವು ನಟ ಸುದೀಪ್ ಅವರಿಗೆ ಯಾವುದೇ ಅಗೌರವ ತೋರಿಲ್ಲ ಎಂದು ಹೇಳಿರುವ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಬಿಜೆಪಿ ಮುಖಂಡ ರಾಜುಗೌಡ ತಮ್ಮ ಹೇಳಿಕೆಯನ್ನು ಟೀಕಿಸಿರುವುದಕ್ಕೆ ಉಗ್ರಪ್ಪ ತಿರುಗೇಟು ನೀಡಿದ್ದಾರೆ.

ಚಿತ್ರದುರ್ಗದಲ್ಲಿ ನಡೆದ ರಾಜ ವೀರಮದಕರಿ ನಾಯಕ ಜಯಂತೋತ್ಸವದ ವೇಳೆ ನಟ ಕಿಚ್ಚ ಸುದೀಪ್ ಹಾಗೂ ಅವರ ಅಭಿಮಾನಿಗಳ ಕುರಿತು ತಾವು ಆಡಿದ ಮಾತುಗಳ ಬಗ್ಗೆ ಮಾತನಾಡಿರುವ ಅವರು, "ಸುದೀಪ್ ಅವರು ಹೋರಾಟಕ್ಕೆ ಬರಬೇಕು ಎಂದು ನಾನು ಹೇಳಿದ್ದೇನೆ. ಈ ಸಮಾಜದ ಪರವಾಗಿ ಹೋರಾಟ ಮಾಡಬೇಕು ಎಂದಿದ್ದೇನೆ, ಇದರಲ್ಲಿ ತಪ್ಪೇನು? ರಾಜುಗೌಡ ಅವರಿಗೆ ಸುದೀಪ್ ಈಗ ಪರಿಚಯವಾಗಿರಬಹುದು, ಆದರೆ ತಮಗೆ ಹಲವು ವರ್ಷಗಳ ಹಿಂದಿನಿಂದಲೂ ಸುದೀಪ್ ಪರಿಚಯವಿದ್ದಾರೆ. 2003ರಲ್ಲೇ ಸುದೀಪ್ ಅವರ ತಂದೆ ಸಂಜೀವ್ ಅವರನ್ನು ಭೇಟಿ ಮಾಡಿದ್ದೆವು" ಎಂದರು.
"ಹಿಂದೆ ಡಾ. ರಾಜ್ಕುಮಾರ್ ಅವರು ಗೋಕಾಕ್ ಚಳುವಳಿಗೆ ಬಂದು ಹೋರಾಟ ಮಾಡಿದ್ದರು ಹಾಗೂ ಅಂಬರೀಷ್ ಅವರು ಕಾವೇರಿ ವಿವಾದದ ಸಂದರ್ಭದಲ್ಲಿ ಹೋರಾಟಕ್ಕೆ ಧುಮುಕಿದ್ದರು. ಮೈ ಡೀಯರ್ ಬ್ರದರ್, ಶೇ. 56 ರಷ್ಟು ಮೀಸಲಾತಿ ಹಾಗೂ ಹಕ್ಕುಗಳ ಹೋರಾಟಕ್ಕೆ ಬನ್ನಿ ಎನ್ನುವುದು ತಪ್ಪಾ? ಸಮಾಜ ಉಳಿದರೆ ಮಾತ್ರ ನಾವು ಉಳಿಯುತ್ತೇವೆ ಮತ್ತು ಸಿ ವರ್ಗದ ಜನರು ಬಲಗೊಂಡರೆ ಮಾತ್ರ ರಾಜಕೀಯ ಉಳಿಯುತ್ತದೆ" ಎಂದು ಹೇಳಿದರು.
"ಸುದೀಪ್ ಅವರ ನಾಯಕತ್ವದಲ್ಲೇ ಬೇಕಾದರೂ ಹೋರಾಟ ಮಾಡೋಣ ಅಥವಾ ಸ್ವಾಮೀಜಿಗಳು ಬಂದರೆ ಅವರ ಜತೆಯೂ ಹೋರಾಟಕ್ಕೆ ನಿಲ್ಲೋಣ. ನಾನು ಯಾರಿಗೂ ಅಗೌರವ ತೋರಿಲ್ಲ ಮತ್ತು ತೋರುವುದೂ ಇಲ್ಲ. ನಮ್ಮ ನೋವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸುದೀಪ್ಗೆ ಸಮಾಜದ ಬೆಂಬಲ ಹೇಗೆ ಬೇಕೋ, ಹಾಗೆಯೇ ಈ ಸಮಾಜಕ್ಕೆ ಸುದೀಪ್ ಅವರ ಬೆಂಬಲವೂ ಬೇಕು.ಇದನ್ನು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲಾ ಕ್ಷೇತ್ರದವರು ಹೋರಾಟಕ್ಕೆ ಬರಬೇಕು" ಎಂದು ಕರೆ ನೀಡಿದರು.