ಮಂಗಳೂರು, ನ 21 (Daijiworld News/MB): ಶ್ರೀಶಾ ನಾಯಕ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ "ಶಕಲಕ ಬೂಂ ಬೂಂ" ಎನ್ನುವ ಕಾಮಿಡಿ ಹಾರರ್ ಸಿನೆಮಾದ ಮಹೂರ್ತವಾಗಿದ್ದು ಈಗ ಶೂಟಿಂಗ್ ಆರಂಭಗೊಂಡಿದೆ.




ಈ ಸಿನೆಮಾದ ಚಿತ್ರೀಕರಣ ಉಡುಪಿ, ಮಣಿಪಾಲ್, ಪರ್ಕಳ, ಕಾರ್ಕಳ, ಮಂಗಳೂರು, ಚಿಕ್ಕಮಗಳೂರು, ಮಡಿಕೇರಿ ಪ್ರದೇಶದಲ್ಲಿ ನಡೆಯಲಿದ್ದು, ಡಿಸೆಂಬರ್ ತಿಂಗಳಲ್ಲಿ 25 ದಿನಗಳ ಅವಧಿಯಲ್ಲಿ ಈ ಚಿತ್ರದ ಚಿತ್ರೀಕರಣದ ಮೊದಲ ಹಂತವು ಮುಗಿಯಲಿದೆ ಎಂದು ತಂಡ ತಿಳಿಸಿದೆ.
ಲಕ್ಷಾ ಶೆಟ್ಟಿ ನಾಯಕಿಯಾಗಿ ನಟಿಸಲಿರುವ ಈ ಸಿನೆಮಾದಲ್ಲಿ ಎಸ್ ಪಿ ಎಲ್ ಹಾಗೂ ಗಾಡ್ವಿನ್ ಸ್ಪಾರ್ಕಲ್ ನಾಯಕರಾಗಿ ನಟಿಸಲಿದ್ದು ಕನ್ನಡ ಹಾಗೂ ತುಳು ಭಾಷೆಯಲ್ಲಿ ಸಿನೆಮಾ ಮೂಡಿಬರಲಿದೆ.
ನಿತ್ಯಾನಂದ ನಾಯಕ್ ಮತ್ತು ಉಮೇಶ್ ಪ್ರಭು ಚಿತ್ರ ನಿರ್ಮಾಣ ಜವಾಬ್ದಾರಿ ಹೊತ್ತಿದ್ದು, ಈ ಸಿನೆಮಾಕ್ಕೆ ಚಿತ್ರಕಥೆ ಎಸ್.ಪಿ.ಎಲ್ ಬರೆದಿದ್ದು, ಅರ್ಜುನ್ ಲೂಯಿಸ್ ಅವರ ಸಂಭಾಷಣೆ ಇದೆ. ಛಾಯಾಗ್ರಹಣ ಹಾಗೂ ಸಂಕಲನ ಪ್ರಜ್ವಲ್ ಸುವರ್ಣ ಮತ್ತು ಅರುಣ್ ರೈ ಪುತ್ತೂರು ಅವರದ್ದು. ಸಿನೆಮಾಕ್ಕೆ ಸಂಗೀತವನ್ನು ಕಾರ್ತಿಕ್ ಮುಲ್ಕಿ, ಪಟ್ಸನ್ ಪೇರೆರ, ಆನಂದ್ ಪೆರ್ಡೂರು ನೀಡಲಿದ್ದಾರೆ.
ಈ ಚಲನಚಿತ್ರದಲ್ಲಿ ಕೋಸ್ಟಲ್ ವುಡ್ ಹಾಗೂ ಸ್ಯಾಂಡಲ್ ವುಡ್ ಸ್ಟಾರ್ ಗಳಾದ ಅರವಿಂದ್ ಬೋಳಾರ್, ಉಮೇಶ್ ಮಿಜಾರು, ರವಿರಾಮ ಕುಂಜ, ರೂಪಶ್ರೀ ವರ್ಕಾಡಿ, ವಸಂತ್ ಮುನಿಯಾಲ್, ಮನೋಹರ್ ನಂದಳಿಕೆ ಮೊದಲಾದವರು ಪಾತ್ರಕ್ಕೆ ಜೀವ ತುಂಬಲಿದ್ದಾರೆ.