ಹೈದರಾಬಾದ್, ನ.16 (DaijiworldNews/AA): ನಟಿ ಸಾಯಿ ಪಲ್ಲವಿ ಇತ್ತೀಚೆಗೆ ಬಿಡುಗಡೆಯಾದ 'ರಾಮಾಯಣ' ಚಿತ್ರದಲ್ಲಿ ಸೀತೆಯ ಪಾತ್ರಕ್ಕಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಹೊಸ ಸಿನಿಮಾವೊಂದರ ಪಾತ್ರಕ್ಕಾಗಿ ಸಾಯಿ ಪಲ್ಲವಿ ತಮ್ಮ ಉದ್ದನೆಯ ಕೂದಲನ್ನು ಕತ್ತರಿಸಿಕೊಂಡಿದ್ದಾರೆ.

ಸಾಯಿ ಪಲ್ಲವಿ ಅವರು 'ಓಂ: ಚಾಪ್ಟರ್ 1 - ಉಧಿರಮ್: ದಿ ಬ್ಲಡ್ ವುಡ್' ಸಿನಿಮಾದಲ್ಲಿ ಖಡಕ್ ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ಪಾತ್ರಕ್ಕಾಗಿ ಸಾಯಿ ಪಲ್ಲವಿ ತಮ್ಮ ಉದ್ದನೆಯ ಕೂದಲನ್ನು ತ್ಯಾಗ ಮಾಡಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಕಥೆ ಕೇಳಿದ ತಕ್ಷಣ ಪಾತ್ರಕ್ಕೆ ತಕ್ಕಂತೆ ಬದಲಾಗಲು ನಿರ್ಧರಿಸಿದೆ. ಕೂದಲು ಕತ್ತರಿಸಿದ ನಂತರ ಮೊದಲಿಗೆ ತಾಯಿಗೆ ವಿಡಿಯೋ ಕರೆ ಮಾಡಿದಾಗ ಅವರು ಶಾಕ್ ಆಗಿ ಕರೆ ಕಟ್ ಮಾಡಿದ್ದರು. ಬಳಿಕ ತಂದೆ ಫೋನ್ ಮಾಡಿ ವಿಗ್ ಹಾಕಿದ್ದೀಯಾ ಎಂದು ಪ್ರಶ್ನಿಸಿದ್ದರು. ಪಾತ್ರಕ್ಕಾಗಿ ಈ ತ್ಯಾಗ ಮಾಡಿರುವುದಾಗಿ ವಿವರಿಸಿದ ಮೇಲೆ ಪೋಷಕರು ಸಮಾಧಾನಗೊಂಡರು ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ಹೀರೋಗಳ ಪಾತ್ರಕ್ಕಾಗಿ ಇಂತಹ ಬದಲಾವಣೆಗಳನ್ನು ಮಾಡಲಾಗುತ್ತದೆ. ಆದರೆ ಕಥೆಯ ಮೇಲಿನ ಪ್ರೀತಿಯಿಂದ ಸಾಯಿ ಪಲ್ಲವಿ ಸ್ವಯಂಪ್ರೇರಿತರಾಗಿ ಕೂದಲು ಕತ್ತರಿಸಿಕೊಂಡು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ ರಾಜ್ಕುಮಾರ್ ಪೆರಿಯಸಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಚಿತ್ರದಲ್ಲಿ ಸಾಯಿ ಪಲ್ಲವಿ ಅವರು ನಿತ್ಯಾ ರೆಡ್ಡಿ ಎಂಬ ಐಪಿಎಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಂಧ್ರಪ್ರದೇಶದಲ್ಲಿ ಎಎಸ್ಪಿಯಾಗಿದ್ದ ಅವರು ನಂತರ ಸಿಬಿಐ ಸೇರುತ್ತಾರೆ. ಕಳ್ಳಸಾಗಣೆ ಜಾಲವನ್ನು ಭೇದಿಸಲು ಇಂಟರ್ಪೋಲ್ ಜೊತೆ ಸೇರಿ 'ಆಪರೇಷನ್ ಮೋಲ್' ಕಾರ್ಯಾಚರಣೆಯನ್ನು ಅವರು ಮುನ್ನಡೆಸುತ್ತಾರೆ.