ಬೆಂಗಳೂರು, ನ.18 (DaijiworldNews/AK): ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದಾದ 57ನೇ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾ – 2026ರ ಭಾರತೀಯ ಪನೋರಮಾ ವಿಭಾಗಕ್ಕೆ ಅನುಪಮಾ ಶರಧಿ ನಿರ್ಮಿಸಿ, ನಿರ್ದೇಶಿಸಿರುವ ತುಳು ಚಿತ್ರ 'ಪಿಲಿ ಚನ್ನೆ' ಆಯ್ಕೆ ಆಗಿದೆ.

ನಿರ್ಮಾಪಕಿ ಹಾಗೂ ನಿರ್ದೇಶಕಿ ಅನುಪಮಾ ಶರಧಿ ನಿರ್ದೇಶನದ 2ನೇ ಚಿತ್ರವಿದು. ಈ ಹಿಂದೆ ನಡುಬೆಟ್ಟು ಅಪ್ಪಣ್ಣ ಎಂಬ ಕನ್ನಡ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದ ಅವರು ಇದೀಗ ತಮ್ಮದೇ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ತುಳು ಭಾಷೆಯ ಪಿಲಿ ಚನ್ನೆ ಚಿತ್ರವನ್ನು ರೂಪಿಸಿದ್ದಾರೆ. ವಿಶೇಷವೆಂದರೆ, ಚಿತ್ರದ ನಿರ್ಮಾಪಕಿ, ಕಥೆಗಾರ್ತಿ, ಚಿತ್ರಕಥೆಗಾರ್ತಿ, ಸಂಭಾಷಣೆಗಾರ್ತಿ, ನಿರ್ದೇಶಕಿ, ಗಾಯಕಿ, ವಸ್ತ್ರ ವಿನ್ಯಾಸಕಿ ಹಾಗೂ ನಟಿ ಸೇರಿದಂತೆ ಹಲವು ಪ್ರಮುಖ ಜವಾಬ್ದಾರಿಗಳನ್ನು ಸ್ವತಃ ಅನುಪಮಾ ಶರಧಿ ಅವರೇ ನಿರ್ವಹಿಸಿದ್ದಾರೆ. ಓರ್ವ ಮಹಿಳೆಯ ಬಹುಮುಖ ಪ್ರತಿಭೆ, ಪರಿಶ್ರಮ ಮತ್ತು ಸೃಜನಶೀಲತೆಗೆ ಈ ಚಿತ್ರ ಸಾಕ್ಷಿಯಾಗಿದೆ.
ಕಾಡಿನ ಹಿನ್ನೆಲೆಯ ಕಥಾಹಂದರ ಹೊಂದಿರುವ ಈ ಚಿತ್ರ ಭವಿಷ್ಯ ಸಿನಿಮಾ ಬ್ಯಾನರ್ನಲ್ಲಿ ನಿರ್ಮಾಣಗೊಂಡಿದೆ. ಚಿತ್ರಕ್ಕೆ ಪಿ.ವಿ.ಆರ್.ಸ್ವಾಮಿ ಅವರ ಕ್ಯಾಮರಾ ವರ್ಕ್, ಅತಿಶಯ್ ಜೈನ್ ಅವರ ಸಂಗೀತ ನಿರ್ದೇಶನ ಹಾಗೂ ಸಂಜೀವ್ ರೆಡ್ಡಿ ಅವರ ಸಂಕಲನ ಇದೆ. ಭವಾನಿ ಶಂಕರ್ ಆಡ್ತಲೆ ಸಾಹಿತ್ಯ ರಚಿಸಿದ್ದಾರೆ.
ಶಿಲ್ಪಾ ನಾಗರಾಜ್, ನವೀನ್ ಡಿ.ಪಡೀಲ್, ವಿಜಯ ಹರಿ ರೈ, ರಾಧಾಕೃಷ್ಣ ಕುಂಬ್ಳೆ, ಗಂಗಾಧರ ನೆಲ್ಲಿಕೋಡ್, ಶಿಲ್ಪ ಸನತ್ ಹಾಗೂ ರವಿ ಪೆರ್ಲಂಪಾಡಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅನುಪಮಾ ಶರಧಿ ಅವರ ಎರಡನೇ ನಿರ್ದೇಶನದ ಚಿತ್ರವೇ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿರುವುದು ಮತ್ತೊಂದು ವಿಶೇಷ ಹೆಮ್ಮೆಯ ಸಂಗತಿಯಾಗಿದೆ.
ಕನ್ನಡ ಮತ್ತು ತುಳು ಚಿತ್ರಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೀಗ ಪಿಲಿ ಚನ್ನೆ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಸಜ್ಜಾಗಿದೆ. ಈ ಚಿತ್ರದ ಆಯ್ಕೆಯು ತುಳು ಚಿತ್ರರಂಗದ ಪ್ರತಿಭೆ, ಭಾಷೆ ಮತ್ತು ಸಂಸ್ಕೃತಿಗೆ ರಾಷ್ಟ್ರಮಟ್ಟದಲ್ಲಿ ದೊರೆತ ಮನ್ನಣೆಯಾಗಿದೆ.