ಚೆನ್ನೈ, ನ.18 (DaijiworldNews/AK): ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಹಾಗೂ ವಿವಾದಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ಜೋವನದ ವಿಚಾರವಾಗಿಯೂ ಕೂಡ ಅವರು ಸದಾ ಸುದ್ದಿಯಲ್ಲಿರುತ್ತಾರೆ.

ಮೊದಲ ಪತ್ನಿ ವಾಣಿ ಗಣಪತಿ ಅವರಿಂದ ವಿಚ್ಛೇದನ ಪಡೆದ ಬಳಿಕ ತಾವು ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದ್ದೆ ಎಂದು ಕಮಲ್ ಹೇಳಿಕೊಂಡಿದ್ದರು. ಈ ಹೇಳಿಕೆಗೆ ವಾಣಿ ಗಣಪತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕೇವಲ ಅನುಕಂಪ ಗಿಟ್ಟಿಸಿಕೊಳ್ಳುವ ತಂತ್ರ ಎಂದು ತಿರುಗೇಟು ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಕಮಲ್ ಹಾಸನ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದರು. ಜೀವನಾಂಶ ನೀಡಿದ ಬಳಿಕ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಶೂನ್ಯಕ್ಕೆ ಇಳಿದಿತ್ತು ಎಂದು ಅವರು ಹೇಳಿದ್ದರು. ಹಣವಿಲ್ಲದೆ ಮಗಳು ಶ್ರುತಿ ಹಾಸನ್ ಜೊತೆ ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳಬೇಕಾಯಿತು ಎಂದಿದ್ದರು. ವೃತ್ತಿಜೀವನ ಉತ್ತುಂಗದಲ್ಲಿದ್ದ ಕಾರಣ ಮತ್ತೆ ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಾಧ್ಯವಾಯಿತು ಎಂದು ಕಮಲ್ ವಿವರಿಸಿದ್ದರು.
ಕಮಲ್ ಅವರ ಈ ಮಾತುಗಳನ್ನು ಮಾಜಿ ಪತ್ನಿ ವಾಣಿ ಗಣಪತಿ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಕಮಲ್ ಹೇಳಿಕೆಗಳು ಅತ್ಯಂತ ಬಾಲಿಶವಾಗಿವೆ. ವಿಚ್ಛೇದನದ ಸಮಯದಲ್ಲಿ ಕಮಲ್ ಬಳಿ ಸ್ವಂತ ಮನೆಯೇ ಇರಲಿಲ್ಲ. ಮದುವೆಯಾದಾಗಿನಿಂದಲೂ ತಾವಿಬ್ಬರು ಬಾಡಿಗೆ ಮನೆಗಳಲ್ಲೇ ವಾಸವಿದ್ದೆವು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅರಮನೆಯಂತಹ ಮನೆಯಿಂದ ಬಾಡಿಗೆ ಮನೆಗೆ ಹೋದೆ ಎಂಬುದು ಶುದ್ಧ ಸುಳ್ಳು. ಮಗಳ ಮುಂದೆ ತ್ಯಾಗಮಯಿ ತಂದೆಯಂತೆ ಬಿಂಬಿಸಿಕೊಳ್ಳಲು ಕಮಲ್ ಈ ರೀತಿ ಮಾತನಾಡುತ್ತಿದ್ದಾರೆ. ಕಮಲ್ ಎಂದಿಗೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಅವರು ದಿವಾಳಿಯಾಗಿದ್ದರೆ ಅದಕ್ಕೆ ಬೇರೆ ಕಾರಣಗಳಿರಬಹುದು ಎಂದು ವಾಣಿ ಗಣಪತಿ ಆಕ್ರೋಶ ಹೊರಹಾಕಿದ್ದಾರೆ.