ಮುಂಬೈ, ಜೂ.16 (DaijiworldNews/MB) : ಸುಶಾಂತ್ ಸಿಂಗ್ ರಾಜಪುತ್ ಆತ್ಮಹತ್ಯೆ ನಮ್ಮಲ್ಲಿ ಅನೇಕರು ಏನು ಅನುಭವಿಸುತ್ತಿದ್ದಾರೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ. ಸಲ್ಮಾನ್ ಖಾನ್ ಕುಟುಂಬದಿಂದ ನಿರಂತರವಾಗಿ ಬೆದರಿಕೆಯೊಡ್ಡುತ್ತಿದ್ದು ಇದರಿಂದಾಗಿ ತನ್ನ ವೃತ್ತಿ ಜೀವನ ಹಾಳಾಗಿದೆ ಎಂದು ನಿರ್ದೇಶಕ ಅಭಿನವ್ ಕಶ್ಯಪ್ ಫೇಸ್ಬುಕ್ನಲ್ಲಿ ಆರೋಪಿಸಿದ್ದಾರೆ.

ಹತ್ತು ವರ್ಷಗಳ ಹಿಂದೆ ದಬಾಂಗ್ ಸಿನಿಮಾದ ನಿರ್ಮಾಣದಿಂದ ಹಿಂದೆ ಸರಿಯುವಂತೆ ಅರ್ಬಾಜ್ ಖಾನ್, ಸೊಹೈಲ್ ಖಾನ್ ಹಾಗೂ ಅವರ ಕುಟುಂಬ ನಿರಂತರವಾಗಿ ಬೆದರಿಕೆಯೊಡ್ಡಿದ್ದು ಅದರಿಂದಾಗಿ ಮಾನಸಿಕವಾಗಿ ತೀವ್ರ ಯಾತನೆ ಅನುಭವಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಎರಡನೇ ಸಿನಿಮಾದ ಮಾಡಲು ಶ್ರೀ ಅಷ್ಟ ವಿನಾಯಕ ಫಿಲಂಸ್ ಮುಖ್ಯಸ್ಥ ರಾಜ್ ಮೆಹ್ತಾ ಅವರೊಂದಿಗೆ ಮಾತನಾಡಿ ಸಹಿ ಕೂಡಾ ಹಾಕಲಾಗಿದ್ದು ಬಳಿಕ ರಾಜ್ ಮೆಹ್ತಾ ಅವರನ್ನು ಕರೆದು ನನ್ನೊಂದಿಗೆ ಚಿತ್ರ ಮಾಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಅರ್ಬಾಜ್ ಖಾನ್ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ನಾನು ಪಡೆದ ಹಣವನ್ನು ಅವರಿಗೆ ಹಿಂದಿರುಗಿಸಬೇಕಾಯಿತು ಎಂದು ತಿಳಿಸಿದ್ದಾರೆ.
ವಯಾಕಾಮ್ ಪಿಕ್ಚರ್ ಸಂಸ್ಥೆಯವರು ಕೂಡಾ ಇದೇ ರೀತಿ ಮಾಡಿದರು. ತನ್ನೊಂದಿಗೆ ಚಿತ್ರ ಮಾಡ ಬಾರದು ಎಂದು ವಯಾಕಾಮ್ ಸಿಇಒ ವಿಕ್ರಮ್ ಮಲ್ಹೋತ್ರಾ ಅವರಿಗೆ ಸೂಹೈಲ್ ಖಾನ್ ಬೆದರಿಸಿದ್ದು ಇದರಿಂದಾಗಿ ಅವರೂ ಕೂಡಾ ಸಹಿಯಾದ ಬಳಿಕ 7 ಕೋಟಿಯನ್ನು ಬಡ್ಡಿ ಸಹಿತ ಹಿಂಪಡೆದರು. ಬಳಿಕ ಬೆಶರಾಮ್ ಚಿತ್ರದ ಮೂಲಕ ರಿಲಯನ್ಸ್ ಎಂಟರ್ ಟೈನ್ ಮೆಂಟ್ನವರು ನನ್ನ ರಕ್ಷಣೆ ಮಾಡಿದರು ಎಂದು ಹೇಳಿದ್ದಾರೆ.
ನನ್ನ ಎಲ್ಲಾ ಪ್ರಾಜೇಕ್ಟ್ಗಳು ಸಲ್ಮಾನ್ ಖಾನ್ ಕುಟುಂಬದಿಂದ ಹಾಳಾಗುತ್ತಿದೆ. ನನ್ನ ಕುಟುಂಬದ ಮಹಿಳೆಯರಿಗೆ ಜೀವ ಹಾಗೂ ಅತ್ಯಾಚಾರದ ಬೆದರಿಕೆಯನ್ನು ಕೂಡಾ ನೀಡಲಾಗುತ್ತಿದೆ ಎಂದು ದೂರಿದ್ದಾರೆ.
2017ರಲ್ಲಿ ಪೊಲೀಸ್ ಠಾಣೆಗೆ ಹೋದರು ದೂರು ದಾಖಲಿಸಿಕೊಳ್ಳಲಿಲ್ಲ. ತಿಳುವಳಿಕೆ ನೀಡುವ ದೂರು ದಾಖಲಿಸಿದರು. ಬೆದರಿಕೆಗಳು ಮುಂದುವರಿದಾಗ, ನನಗೆ ಕರೆ ಬರುವ ಸಂಖ್ಯೆಯನ್ನು ಪತ್ತೆಹಚ್ಚಲು ಪೊಲೀಸರನ್ನು ಒತ್ತಾಯಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ನನ್ನ ದೂರು ನೀಡಿದ ಬಗ್ಗೆ ನನ್ನ ಬಳಿ ಇನ್ನೂ ಎಲ್ಲಾ ಪುರಾವೆಗಳಿವೆ ಎಂದು ಹೇಳಿದ್ದಾರೆ.
ಹಾಗೆಯೇ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆಯಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.