ನವದೆಹಲಿ, ಜೂ. 27 (DaijiworldNews/MB) : ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಭಾರತ ಸೈನಿಕರ ನಡುವೆ ಘರ್ಷಣೆ ಉಂಟಾಗಿ ಭಾರತದ 20 ಯೋಧರು ಹುತಾತ್ಮರಾದ ಬೆನ್ನಲ್ಲೇ ದೇಶದಲ್ಲಿ ಚೀನಾದ ಉತ್ಪನ್ನಗಳ ಬಹಿಷ್ಕಾರದ ಕೂಗು ಮತ್ತಷ್ಟು ಹೆಚ್ಚಾಗಿದ್ದು ಈ ಅಭಿಯಾನಕ್ಕೆ ಜೊತೆಯಾಗಿರುವ ಬಾಲಿವುಡ್ ನಟಿ ಕಂಗನಾ ರನೌತ್ 'ಆತ್ಮನಿರ್ಭರ್'ರಾಗಿ ಎಂದು ಭಾರತದ ಜನತೆಗೆ ಕರೆ ಕೊಟ್ಟಿದ್ದಾರೆ.

ಈ ಬಗ್ಗೆ ಸುಮಾರು ಒಂದು ನಿಮಿಷ 41 ಸೆಕೆಂಡ್ಗಳ ವಿಡಿಯೋ ಮೂಲಕ ಹೇಳಿರುವ ಅವರು, ''ಯಾರಾದರೂ ನಮ್ಮ ಕೈಯಿಂದ ಬೆರಳುಗಳನ್ನು ಕತ್ತರಿಸಲು ಪ್ರಯತ್ನಿಸಿದರೆ ನಿಮಗೆ ಯಾವ ರೀತಿ ಕಷ್ಟವಾಗಬಹುದು. ಅದೇ ಕಷ್ಟವನ್ನು ಲಡಾಖ್ನ ಮೇಲೆ ಕಣ್ಣು ಹಾಕಿ ಚೈನಾ ನಮಗೆ ನೀಡಿದೆ. ನಮ್ಮ ದೇಶದ ಪ್ರತಿಯೊಂದು ಇಂಚನ್ನು ರಕ್ಷಿಸುತ್ತಾ ನಮ್ಮ ದೇಶದ 20 ಯೋಧರು ಹುತಾತ್ಮರಾಗಿದ್ದಾರೆ. ನಾವು ಈ ಯೋಧರ ತಾಯಂದಿರ ಕಣ್ಣೀರು, ವಿಧವೆಯಾದವರ ರೋಧನ, ಮಕ್ಕಳ ನೋವನ್ನು ಮರೆಯಲು ಸಾಧ್ಯವೇ?'' ಎಂದು ಪ್ರಶ್ನಿಸಿದ್ದಾರೆ.
''ನಾವು ಸೇನೆಗಳ ನಡುವೆ ನಡೆಯುವ ಯುದ್ಧವನ್ನು ಸೇನೆಗಳು ಹಾಗೂ ಸರ್ಕಾರಕ್ಕೆ ಮಾತ್ರ ಸೀಮಿತವೆಂದು ಭಾವಿಸಬಹುದೆ? ನಮ್ಮ ಯಾವುದೇ ಯೋಗ ದಾನವಿಲ್ಲವೇ? ಮಹಾತ್ಮ ಗಾಂಧಿಯವರು ದೇಶದಲ್ಲಿ ಆಂಗ್ಲರ ಆಡಳಿತ ಕೊನೆಗೊಳಿಸಲು ಬ್ರಿಟಿಷ್ ಸರಕುಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದನ್ನು ನಾವು ಮರೆತಿದ್ದೇವೆಯೇ? ಲಡಾಖ್ ಕೇವಲ ಜಮೀನಿನ ಭಾಗವಲ್ಲ ಭಾರತದ ಅಸ್ಮಿತೆಯ ಬಹು ದೊಡ್ಡ ಭಾಗವಾಗಿರುವಾಗ ಈ ಯೋಧದಲ್ಲಿ ನಾವು ಕೂಡಾ ಭಾಗಿಯಾಗುವುದು ಮುಖ್ಯವಲ್ಲವೇ? ಆದ್ದರಿಂದ ನಾವೆಲ್ಲರೂ ಚೀನಾದ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು. ನಾವು ಆತ್ಮನಿರ್ಭರರಾಗಿ ಚೈನೀಸ್ ಉತ್ಪನ್ನಗಳನ್ನು ಬಹಿಷ್ಕಾರ ಮಾಡುವ ಪ್ರತಿಜ್ಞೆ ಮಾಡಿ ಈ ಯುದ್ಧದಲ್ಲಿ ಭಾರತವನ್ನು ಗೆಲ್ಲಿಸಬೇಕು'' ಎಂದು ಹೇಳಿದ್ದಾರೆ.