ಮುಂಬೈ, ಜು.13 (DaijiworldNews/MB) : ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಅವರ ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಹಾಗೂ ಮೊಮ್ಮಗಳು ಆರಾಧ್ಯಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಈಗ ಅಮಿತಾಬ್ ಕುಟುಂಬಕ್ಕೆ ಸೇರಿದ ನಾಲ್ಕು ಬಂಗಲೆಗಳನ್ನು ಸೀಲ್ಡೌನ್ ಮಾಡಲಾಗಿದೆ.

ಪ್ರತೀಕ್ಷ, ಜನಕ್, ವತ್ಸ ಮತ್ತು ಜಲ್ಸಾ ಎಂಬ ಹೆಸರಿನ ನಾಲ್ಕು ಬಂಗಲೆಗಳಿಗೆ ಭಾನುವಾರ ಬೃಹತ್ ಮುಂಬೈ ನಗರಪಾಲಿಕೆ (ಬಿಎಂಸಿ) ಸೀಲ್ಡೌನ್ ಮಾಡಿ ಬಂಗಲೆಗಳಿಗೆ ಮೊಹರು ಹಾಕಿದೆ. ಹಾಗೆಯೇ ಬಂಗಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ೩೦ ಮಂದಿಯ ಕೊರೊನಾ ಪರೀಕ್ಷೆ ನಡೆಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ.
ಶನಿವಾರ ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದ್ದು ಅಭಿಮಾನಿಗಳು ತೀರ ಆತಂಕಕ್ಕೆ ಒಳಗಾಗಿದ್ದರು. ಭಾನುವಾರ ಅಭಿಷೇಕ್ ಬಚ್ಚನ್ ಪತ್ನಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಪುತ್ರಿ ಆರಾಧ್ಯ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿತ್ತು. ಅಮಿತಾಬ್ ಬಚ್ಚನ್ ಪತ್ನಿ ಜಯ ಬಚ್ಚನ್ ವರದಿ ನೆಗೆಟಿವ್ ಆಗಿತ್ತು.
ಭಾನುವಾರ ಸಂಜೆ ಇನ್ಸ್ಸ್ಟಾದಲ್ಲಿ ಪೋಸ್ಟ್ ಮಾಡಿರುವ ಅಭಿಷೇಕ್ ಬಚ್ಚನ್, ನಿನ್ನೆ ನನಗೆ ಹಾಗೂ ತಂದೆ ಇಬ್ಬರಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ನಾವಿಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದೇವೆ. ಅಧಿಕಾರಿಗಳಿಗೆ ಅಗತ್ಯವಿರುವ ಎಲ್ಲ ಮಾಹಿತಿ ನಾವು ನೀಡಿದ್ದೇವೆ. ನಮ್ಮ ಕುಟುಂಬ ಮತ್ತು ಸಿಬ್ಬಂದಿಯನ್ನು ಪರೀಕ್ಷಿಸಲಾಗುತ್ತಿದೆ. ಬಿಎಂಸಿ ಸಂಪರ್ಕದಲ್ಲಿದೆ. ಎಲ್ಲರೂ ಶಾಂತವಾಗಿರಿ ಆತಂಕಕ್ಕೆ ಒಳಗಾಗಬೇಡಿ ಎಂದು ತಿಳಿಸಿದ್ದಾರೆ.