ಮುಂಬೈ, ಜು.18 (DaijiworldNews/MB) : ''ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರಕ್ಕೆ ಸಂಬಂಧಿಸಿ ನಾನು ಮಾಡಿದ ಆರೋಪ ಸುಳ್ಳಾದ್ರೆ ಪದ್ಮಶ್ರೀ ಪ್ರಶಸ್ತಿ ವಾಪಾಸ್ ನೀಡ್ತೇನೆ'' ಎಂದು ನಟಿ ಕಂಗನಾ ರಣಾವತ್ ಅವರು ಹೇಳಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಜೂನ್ 14ರಂದು ಮುಂಬೈನ ತಮ್ಮ ನಿವಾಸದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಈ ಬಗ್ಗೆ ನಟಿ ಕಂಗನಾ ತನ್ನ ಒಂದು ವಿಡಿಯೋ ಮೂಲಕ ''ಇದೊಂದು ಆತ್ಮಹತ್ಯೆಯಲ್ಲ, ಅದು ಕೊಲೆ. ಬಾಲಿವುಡ್ನ ಮೂವಿ ಮಾಫಿಯಾ ಸುಶಾಂತ್ ಅವರನ್ನು ಪ್ಲಾನ್ ಮಾಡಿ ಕೊಲೆ ಮಾಡಿದೆ'' ಎಂದು ಹೇಳಿದ್ದು ಗಲ್ಲಿ ಬಾಯ್ ಸಿನಿಮಾ ಮತ್ತು ನಟ ಸಂಜಯ್ ದತ್ ಅವರ ಹೆಸರನ್ನು ಕೂಡಾ ಉಲ್ಲೇಖ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಹಲವರು ಇದು ಕೊಲೆ ಎಂಬ ಆರೋಪವನ್ನು ಮಾಡಲು ಆರಂಭಿಸಿದ್ದಾರೆ. ಈ ಹಿನ್ನಲೆ ಮುಂಬೈ ಪೊಲೀಸರು, ಕಂಗನಾ ವಿರುದ್ಧ ಸಮನ್ಸ್ ಜಾರಿಮಾಡಿ ಆರೋಪವನ್ನು ಸಾಬೀತು ಮಾಡುವಂತೆ ತಿಳಿಸಿದ್ದಾರೆ.
ಇದೀಗ ಈ ಬಗ್ಗೆ ಮತ್ತೆ ಖಡಕ್ ಆಗಿ ನೇರ ಮಾತನಾಡಿರುವ ಕಂಗನಾ, ''ನಾನು ಹೇಳಿರುವುದನ್ನು ಸಾಬೀತುಪಡಿಸಲು ಸಾಧ್ಯವಿಲ್ಲ. ಆದರೆ ಜನರು ಈ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಜನರು ಕೂಡಾ ಈ ಆರೋಪವನ್ನು ಅಲ್ಲಗಳೆದರೆ ನಾನು ಪದ್ಮಶ್ರೀ ಪ್ರಶಸ್ತಿಯನ್ನು ವಾಪಾಸ್ ನೀಡುತ್ತೇನೆ'' ಎಂದು ಹೇಳಿದ್ದಾರೆ.
ಈ ಹಿಂದೆ ಸುಶಾಂತ್ ಖಿನ್ನತೆಗೆ ಒಳಗಾಗಿ ಡ್ರಗ್ಸ್ ಸೇವಿಸುತ್ತಿದ್ದರು ಎಂದೆಲ್ಲಾ ಬರೆದಿದ್ದ ಓರ್ವ ಪತ್ರಕರ್ತರ ವಿರುದ್ಧ ವಾಗ್ದಾಳಿ ನಡೆಸಿದ್ದ ಕಂಗನಾ, ''ಯಾಕೆ ನಿಮಗೆ ಸಂಜಯ್ ದತ್ ಅವರ ಅಡಿಕ್ಷನ್ ಕ್ಯೂಟ್ ಆಗಿ ಕಾಣುತ್ತಾ?'' ಎಂದು ಪ್ರಶ್ನಿಸಿದ್ದರು.