ಸುಪ್ರೀತಾ ಸಾಲ್ಯಾನ್
ಮೋಹಕ ಅಭಿನಯ, ಆಕರ್ಷಕ ನೃತ್ಯ ಭಂಗಿಯ ಮೂಲಕ ಕಲಾರಸಿಕರ ಮನಸ್ಸಿನಲ್ಲಿ ನೆಲೆಯೂರಿದ ಅಪ್ರತಿಮ ನೃತ್ಯ ಕಲಾವಿದೆ ಈಕೆ. ಈ ಅದ್ವಿತೀಯ ನೃತ್ಯ ಸಾಧಕಿಯ ಹಾವ - ಭಾವ, ನೋಟ, ಆ ತೀಕ್ಷ್ಣತೆಗೆ ಎಂತವರಾದರೂ ಒಮ್ಮೆ ತಲೆದೂಗಲೇಬೇಕು. ಕಾಲಿಗೆ ಗೆಜ್ಜೆ ಕಟ್ಟಿ ವೇದಿಕೆಯಲ್ಲಿ ಕುಣಿದರೆ, ಆ ಗೆಜ್ಜೆಯ ನಾದಕ್ಕೆ ಮನಸೋಲದವರು ಯಾರೂ ಇಲ್ಲ. ಅಷ್ಟಕ್ಕೂ ಅಂಬೆಗಾಲಿಡುವ ವಯಸ್ಸಿನಲ್ಲಿ ನೃತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ಬಾಚಿಕೊಂಡಿರುವ ಈ ಕಲಾಸಾಧಕಿ ಯಾರು ಗೊತ್ತಾ..? ತುಳುವ ಸಿರಿ ಅದ್ವಿಕಾ ಶೆಟ್ಟಿ.
ಈಕೆಯದು ಕೇವಲ ಹದಿನಾಲ್ಕರ ವಯಸ್ಸು. ಆದರೆ ಈಕೆ ನೃತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ವಯಸ್ಸನ್ನೂ ಮೀರಿಸುವಂತಹದ್ದು. ಕಲಾಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಕರಾವಳಿಯ ಈ ಪುಟ್ಟ ಬಾಲೆ ಯಕ್ಷ ಗಾನ, ಡಾನ್ಸ್, ಭರತನಾಟ್ಯ, ಸಂಗೀತ, ಸೈಕ್ಲಿಂಗ್, ಅಂಚೆ ಚೀಟಿ ಸಂಗ್ರಹ, ಚಿತ್ರ ರಚನೆ, ಯೋಗ, ಮಾಡೆಲಿಂಗ್ ಸೇರಿದಂತೆ ಅನೇಕ ಕಲಾಪ್ರಕಾರಗಳಲ್ಲಿ ಸದಾ ಮುಂದು.
ಸುರತ್ಕಲ್ ಸುಭಾಷಿತ ನಗರದ ವೇಣುಗೋಪಾಲ್ ಶೆಟ್ಟಿ, ಹೇರೂರು ಮತ್ತು ಅರ್ಪಿತಾ ಶೆಟ್ಟಿ, ಮುಂಡಬೆಟ್ಟು ಗುತ್ತು ದಂಪತಿಯ ಪುತ್ರಿಯಾದ ಅದ್ವಿಕಾ ಶೆಟ್ಟಿಗೆ ನೃತ್ಯ ಕ್ಷೇತ್ರದಲ್ಲಿ ಎಲ್ಲಿಲ್ಲದ ಆಸಕ್ತಿ. ಎಳೆಯ ವಯಸ್ಸಿನಲ್ಲಿಯೇ ಕಾಲಿಗೆ ಗೆಜ್ಜೆ ಕಟ್ಟಿಕೊಂಡ ಇವರು ಒಮ್ಮೆಯೂ ಹಿಂದಿರುಗಿ ನೋಡಿಲ್ಲ. ಮಂಗಳೂರಿನ ಓಷಿಯನ್ ಕಿಡ್ಸ್ ಡಾನ್ಸ್ ಅಕಾಡೆಮಿಯ ಪ್ರಮೋದ್ ಆಳ್ವ ಅವರ ಮಾರ್ಗದರ್ಶನದಲ್ಲಿ ಬೇರೆ ಬೇರೆ ನೃತ್ಯಪ್ರಕಾರಗಳಲ್ಲಿ ಪಳಗಿದ ಇವರು ಅದ್ವಿತೀಯ ನೃತ್ಯ ಸಾಧಕಿ. ಪಾಶ್ಚಾತ್ಯ, ಕಥಕ್, ಜಾನಪದ, ಸೆಮಿ ಕ್ಲಾಸಿಕಲ್ ಸೇರಿದಂತೆ ನೃತ್ಯದ ಅನೇಕ ಕಲಾ ಪ್ರಕಾರಗಳನ್ನು ಕಲಿಯುತ್ತಿರುವ ಇವರು, ವಿದುಷಿ ಪ್ರತಿಮಾ ಶ್ರೀಧರ್ ಹಾಗೂ ಶ್ರೀಧರ್ ಹೊಳ್ಳ ಅವರ ಗರಡಿಯಲ್ಲಿ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ. ಜೊತೆಗೆ ಗುರುಗಳಾದ ಸುಹಾಸ್ ಅಮೀನ್ ಅವರಿಂದ ಹಿಪ್ ಹಾಪ್ ಡಾನ್ಸ್ ಕಲಿಯುತ್ತಿದ್ದಾರೆ.
ಇನ್ನು ಈ ಪ್ರತಿಭೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದರೆಂದರೆ ಉತ್ತಮ ಯಕ್ಷಗಾನ ಕಲಾವಿದೆಯೂ ಹೌದು. ಯಕ್ಷಗಾನದಲ್ಲೂ ಈ ಪ್ರತಿಭೆಯದು ಎತ್ತಿದ ಕೈ. ಗುರುಗಳಾದ ರಕ್ಷಿತ್ ಶೆಟ್ಟಿ ಪಡ್ರೆಯವರಿಂದ ಧೀಂಕಿಟದ ದೀಕ್ಷೆ ಪಡೆದುಕೊಂಡಿರುವ ಅದ್ವಿಕಾ ಯಕ್ಷಗಾನ ಕುಣಿತ ಮತ್ತು ಮಾತುಗಾರಿಕೆಯನ್ನು ಬಹಳ ಸಲೀಸಾಗಿ ಕರಗತ ಮಾಡಿಕೊಂಡಿದ್ದಾರೆ. ಶ್ರೀಕೃಷ್ಣ, ಸುದರ್ಶನ, ಕಾಳಿ, ಸತ್ಯವತಿ ಹೀಗೆ ಅನೇಕ ಪಾತ್ರಗಳ ಮೂಲಕ ಯಕ್ಷರಂಗದಲ್ಲಿ ಮಿಂಚಿ, ರಂಗದಲ್ಲಿ 200ಕ್ಕೂ ಮಿಕ್ಕಿ ಪ್ರದರ್ಶನ ನೀಡಿ ಕಲಾರಸಿಕರಿಂದ ಭೇಷ್ ಅನಿಸಿಕೊಂಡಿದ್ದಾರೆ.
ತನ್ನ ಎಳೆಯ ವಯಸ್ಸಿನಲ್ಲಿಯೇ ರಾಜ್ಯ, ಅಂತರ್ ಜಿಲ್ಲಾ ಮಟ್ಟ ಮತ್ತು ಅನೇಕ ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನ ಮುಡಿಗೇರಿಸಿಕೊಂಡು ಬಂದಿರುವ ಅದ್ವಿಕಾ ಶೆಟ್ಟಿ 750ಕ್ಕೂ ಮಿಕ್ಕಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ತಮ್ಮ ಏಳನೇ ವಯಸ್ಸಿನಲ್ಲಿ ಝೀ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಡಾನ್ಸ್ ಇಂಡಿಯಾ ಡ್ಯಾನ್ಸ್ ಲಿಟಲ್ ಮಾಸ್ಟರ್, ಈ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದಿ ಜ್ಯೂನಿಯರ್ಸ್ ರಿಯಾಲಿಟಿ ಶೋದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದರು. ತದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿ ಮಿಂಚಿ ಎಲ್ಲರಿಂದಲೂ ಭೇಷ್ ಅನಿಸಿಕೊಂಡಿದ್ದರು. ಅದರಲ್ಲೂ ಡಿಐಡಿ ಲಿಟ್ಲ್ ಮಾಸ್ಟರ್ಸ್ ಸೀಸನ್ 3ಗೆ ಆಯ್ಕೆಯಾಗಿದ್ದ ಅದ್ವಿಕಾ, ಉತ್ತಮ ಪ್ರದರ್ಶನ ನೀಡಿ ರಾಜ್ಯ ಮಾತ್ರವಲ್ಲ ಹೊರ ರಾಜ್ಯದಲ್ಲೂ ಪ್ರಶಂಸೆಗೆ ಪಾತ್ರವಾಗಿದ್ದರು. ಇವೆಲ್ಲವೂ ಇವರ ನೃತ್ಯ ವೈಖರಿಗೆ ಹಿಡಿವ ಕನ್ನಡಿ.
ರಾಜ್ಯ ಹೊರ ರಾಜ್ಯ ಸೇರಿದಂತೆ ವಿದೇಶದಲ್ಲಿಯೂ ತನ್ನ ಪ್ರತಿಭಾ ಕಂಪನ್ನು ಹರಿಸಿದ್ದಾರೆ. ನೃತ್ಯ ಕಲಾ ಕ್ಷೇತ್ರದಲ್ಲಿ 1000 ಕ್ಕೂ ಹೆಚ್ಚು ನೃತ್ಯ ಪ್ರದರ್ಶನ ನೀಡಿರುವ ಅದ್ವಿಕಾ ಇದೀಗ ಸದ್ದಿಲ್ಲದೆ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಸದ್ಯ ಡೆಲ್ಲಿ ಪಬ್ಲಿಕ್ ಸ್ಕೂಲ್ ಎಂ.ಆರ್.ಪಿ.ಎಲ್ ಶಾಲೆಯಲ್ಲಿ ಕಲಿಯುತ್ತಿರುವ ಅದ್ವಿಕಾ ಶೆಟ್ಟಿಯ ಕಲಾ ಕ್ಷೇತ್ರದ ಈ ಎಲ್ಲಾ ಸಾಧನೆಗೆ ರಾಜ್ಯ ಪ್ರಶಸ್ತಿ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಪ್ರತಿಭಾ ರತ್ನ, ಸೌರಭ ಪ್ರತಿಭಾ ಪುರಸ್ಕಾರ ಸೇರಿದಂತೆ ಅನೇಕ ಪಶಸ್ತಿಗಳು ಸಂದಿವೆ.