ಲಂಡನ್, ಎಂ6(SS): ಲಂಡನ್ ಲಾ ವಿಶ್ವವಿದ್ಯಾಲಯ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.
ಏಪ್ರಿಲ್ 4ರಂದು ಲಂಡನ್ನಲ್ಲಿ ಶಾರುಖ್ ಖಾನ್ಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ವಿವಿಯ ಕುಲಪತಿ ಮತ್ತು ಸಿಇಒ, ಪ್ರೊಫೆಸರ್ ಆಂಡ್ರೆ ನೊಲ್ಲೆಂಟ್ ಅವರಿಂದ ಶಾರುಖ್ ಖಾನ್ ಗೌರವ ಡಾಕ್ಟರೇಟ್ ಸ್ವೀಕರಿಸಿದರು.
ಮಾನವ ಹಕ್ಕುಗಳಿಗಾಗಿ ಹೋರಾಟ, ನ್ಯಾಯ ಮತ್ತು ಅಪರಾಧಗಳನ್ನು ಕಡಿಮೆ ಮಾಡಲು ಶ್ರಮಿಸಿದ್ದಕ್ಕಾಗಿ ಈ ಗೌರವ ನೀಡಲಾಗಿದೆ.ಒಟ್ಟು 350 ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶಾರುಖ್ಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಶಾರುಖ್ ಖಾನ್ ಈಗಾಗಲೇ ಬೆಡ್ಫೋರ್ಡ್ಶೈರ್ ಮತ್ತು ಎಡಿನಬರೋ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ಗೆ ಪಾತ್ರರಾಗಿದ್ದಾರೆ.
ಯಾವುದೇ ಚಾರಿಟಿಯನ್ನು ನಿಶ್ಯಬ್ದವಾಗಿ ಮತ್ತು ಘನತೆಯಿಂದ ಮಾಡಬೇಕು. ಆ ರೀತಿ ಮಾಡದಿದ್ದಲ್ಲಿ ಅದರ ಉದ್ದೇಶ ಕಳೆದುಕೊಳ್ಳುತ್ತದೆ ಎಂದು ಶಾರುಖ್ ಹೇಳಿದ್ದಾರೆ.
ಶಾರುಖ್ ಖಾನ್ ಅವರು ಯಾವುದೇ ಲಾಭಾಪೇಕ್ಷೆ ಇಲ್ಲದ ಮೀರ್ ಫೌಂಡೇಷನ್ ಎಂಬ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಈ ಸಂಸ್ಥೆ ಆ್ಯಸಿಡ್ ದಾಳಿ ಸಂತ್ರಸ್ತರ ಪರ ಹೋರಾಡುತ್ತಿದೆ. ಇದರ ಜತೆಗೆ ಸರಕಾರ ಹಮ್ಮಿಕೊಂಡಿರುವ ಪಲ್ಸ್ ಪೋಲಿಯೊ, ಏಡ್ಸ್ ನಿಯಂತ್ರಣದಂತಹ ಕಾರ್ಯಕ್ರಮಗಳ ಜತೆಗೂ ಕೈಜೋಡಿಸಿ ಕೆಲಸ ಮಾಡುತ್ತಿದೆ.