ಬೆಂಗಳೂರು, ಎ16(Daijiworld News/SS): ನಟಿ ಸೌಂದರ್ಯ ನಿಧನರಾಗಿ ಇಂದಿಗೆ (ಏಪ್ರಿಲ್ 17) ಬರೋಬ್ಬರಿ 15 ವರ್ಷಗಳು. ಚಿತ್ರರಂಗದ ಅಪ್ಪಟ ಪ್ರತಿಭೆ ಇಹಲೋಕದಿಂದ ಮರೆಯಾದರೂ ನಮ್ಮ ಮನದಲ್ಲಿ ಇಂದಿಗೂ ಅಜರಾಮರವಾಗಿದ್ದಾರೆ. ಅವರ ನೆನಪುಗಳು ಅಭಿಮಾನಿಗಳಲ್ಲಿ ಇಂದಿಗೂ ಹಾಗೆಯೇ ಇದೆ.
2004ರ ಏಪ್ರಿಲ್ 17ರಂದು ಬೆಂಗಳೂರಿನ ಜಕ್ಕೂರು ವಿಮಾನ ನೆಲೆಯಿಂದ ಆಂಧ್ರ ಪ್ರದೇಶಕ್ಕೆ ಚುನಾವಣಾ ಪ್ರಚಾರ ಸಲುವಾಗಿ ಹೊರಟಾಗ ವಿಮಾನ ಪತನವಾಗಿ ನಟಿ ಸೌಂದರ್ಯ ಸಜೀವ ದಹನವಾದರು. ಈ ದುರಂತದ ವೇಳೆ ನಟಿ ಸೌಂದರ್ಯ ಹಾಗೂ ಅವರ ಅಣ್ಣ ಅಮರನಾಥ್ ಸಾವನ್ನಪ್ಪಿದ್ದರು.
ಒಂದು ಕಾಲದಲ್ಲಿ ತನ್ನ ನಟನೆಯ ಮೂಲಕ ಇಡೀ ಭಾರತಾದ್ಯಂತ ಅಭಿಮಾನಿಗಳನ್ನ ಗಳಿಸಿಕೊಂಡ ನಟಿ ಸೌಂದರ್ಯ. 32 ವರ್ಷದ ಸೌಂದರ್ಯ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದರು. ಬೆಂಗಳೂರಿನ ಹುಡುಗಿಯಾದರೂ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಅವಕಾಶಗಳನ್ನು ಪಡೆಯದ ಸೌಂದರ್ಯ, ತೆಲುಗು ಚಿತ್ರರಂಗದಲ್ಲಿ ಖ್ಯಾತಿಯ ಉತ್ತುಂಗಕ್ಕೇರಿದ್ದರು. ಕೌಟುಂಬಿಕ ಚಿತ್ರಗಳಲ್ಲಿ ನಟಿಸುವ ಮೂಲಕ ಸೌಂದರ್ಯ ಹೆಂಗಳೆಯರ ಮೆಚ್ಚಿನ ನಟಿಯಾಗಿದ್ದರು. ದ್ವೀಪ, ದೋಣಿ ಸಾಗಲಿ ಹಾಗೂ ಸಿಪಾಯಿ ಸೌಂದರ್ಯ ಅವರಿಗೆ ಕನ್ನಡದಲ್ಲಿ ಹೆಸರು ತಂದುಕೊಟ್ಟಿದ್ದ ಚಿತ್ರಗಳು.
ಇಂದಿಗೆ ನಟಿ ಸೌಂದರ್ಯ ನಿಧನರಾಗಿ ಬರೋಬ್ಬರಿ 15 ವರ್ಷಗಳಾಗಿದೆ.