ಶಿರಸಿ, ಜು.01(DaijiworldNews/AA): ಅಮೆರಿಕದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಶಿರಸಿ ಮುಂಡಿಗೇಸರ ಮೂಲದ ಹುಬ್ಬಳ್ಳಿಯ ಡಾ|ಶ್ರುತಿ ಹೆಗಡೆ ವಿಜೇತಳಾಗಿದ್ದಾಳೆ.

ಶ್ರುತಿ ಹೆಗಡೆ ಅವರು ಮುಂಡಿಗೇಸರ ಅಜ್ಜೊರಮನೆ ಕುಟುಂಬದವರಾದ ಹುಬ್ಬಳ್ಳಿಯಲ್ಲಿ ನೆಲೆಸಿರುವ ಕೃಷ್ಣ ಹೆಗಡೆ, ಕಮಲಾ ದಂಪತಿಯ ಪುತ್ರಿಯಾಗಿದ್ದಾರೆ. ಶ್ರುತಿ ಹೆಗಡೆ ಅಮೆರಿಕದಲ್ಲಿ ನಡೆದ 'ಮಿಸ್ ಯುನಿವರ್ಸ್ ಪಿಟೈಟ್' ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಇದೀಗ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಶ್ರುತಿ ಅವರು ಈ ಮೊದಲು 2018ರಲ್ಲಿ ಮಿಸ್ ಕರ್ನಾಟಕ ರನ್ನರ್ ಅಪ್, ಮಿಸ್ ಸೌತ್ ಇಂಡಿಯಾ ವಿಜೇತೆಯಾಗಿದ್ದರು. ಜೊತೆಗೆ 2023ರಲ್ಲಿ ಮಿಸ್ ಏಷ್ಯಾ ಇಂಟರ್ ನ್ಯಾಷನಲ್ ಇಂಡಿಯಾ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದರು.
ಅಮೆರಿಕದ ಪ್ಲೋರಿಡಾದಲ್ಲಿ ಜೂ.6ರಿಂದ 10ವರೆಗೆ ಆಯೋಜಿತವಾಗಿದ್ದ ಸ್ಪರ್ಧೆಯಲ್ಲಿ ಭಾರತ ಸೇರಿದಂತೆ ಒಟ್ಟೂ 40 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಇದೀಗ ಈ ಸ್ಪರ್ಧೆಯಲ್ಲಿ ಶ್ರುತಿ ಅವರು ವಿಜೇತರಾಗಿದ್ದಾರೆ.
ಹುಬ್ಬಳ್ಳಿಯಲ್ಲಿಯೇ ಎಂಬಿಬಿಎಸ್ ಪೂರೈಸಿರುವ ಡಾ|ಶ್ರುತಿ ಹೆಗಡೆ, ಚರ್ಮ ರೋಗ ತಜ್ಞೆಯಾಗುವ ಹಂಬಲದಿಂದ ತುಮಕೂರಿನಲ್ಲಿ ಎಂಡಿ ಅಧ್ಯಯನ ಪೂರ್ಣಗೊಳಿಸಿರುತ್ತಾರೆ. ಶ್ರುತಿ ಅವರು ಭರತನಾಟ್ಯ ಕಲಾವಿದೆಯೂ ಆಗಿದ್ದು, ದುಬೈ, ಮಾಲ್ಡಿವ್ಸ್, ಭೂತಾನ್ ಸೇರಿ ವಿವಿಧ ದೇಶಗಳಲ್ಲಿ ಪ್ರದರ್ಶನ ನೀಡಿರುತ್ತಾರೆ. ಶ್ರುತಿ ಅವರು ಕೆಲ ಧಾರಾವಾಹಿ, ಕನ್ನಡ ಚಲನಚಿತ್ರ, ವೆಬ್ ಸಿರೀಸ್ನಲ್ಲೂ ನಟಿಸಿರುತ್ತಾರೆ.