ಟೊರಾಂಟೋ, ಆ.30(DaijiworldNews/TA):ಕೆನಡಾ ಸರ್ಕಾರದ ವಲಸೆ ನೀತಿಯಿಂದಾಗಿ ಅಲ್ಲಿ ಸುಮಾರು 70 ಸಾವಿರ ವಿದೇಶಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಲ್ಲಿ ಭಾರತೀಯರೇ ಬಹು ಸಂಖ್ಯಾತರು. ಈ ಕಾರಣದಿಂದಾಗಿ ಸರ್ಕಾರ ಕೂಡಲೇ ತನ್ನ ವಲಸೆ ನೀತಿ ಬದಲಿಸಬೇಕು ಎಂದು ಆಗ್ರಹಿಸಿ ವಿದೇಶಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದಿದ್ದಾರೆ.
ಪ್ರತಿಭಟನೆಗಳಲ್ಲಿ ಕೆನಡಾ ದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳು ಮಾತ್ರವಲ್ಲ ಕುಶಲಕರ್ಮಿಗಳು, ವೃತ್ತಿಪರ ಕೌಶಲ್ಯ ಹೊಂದಿರುವ ಉದ್ಯೋಗಿಗಳೂ ಸೇರಿಕೊಂಡಿದ್ದಾರೆ. ಒಂದು ವೇಳೆ ಸರ್ಕಾರ ತನ್ನ ವಲಸೆ ನೀತಿ ಬದಲಿಸದಿದ್ದರೆ ಸಾವಿರಾರು ಮಂದಿ ಕೆನಡಾದಿಂದ ಗಡಿಪಾರಾಗಿ ತಮ್ಮ ತವರು ದೇಶಕ್ಕೆ ವಾಪಸ್ ಹೋಗಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಇಲ್ಲಿನ ಸರ್ಕಾರ ವಿದೇಶಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಶಾಶ್ವತ ನಿವಾಸಿ ದರ್ಜೆ ನೀಡುವ ಪ್ರಮಾಣವನ್ನು ಶೇ. 25ರಷ್ಟು ಕಡಿತಗೊಳಿಸಿದೆ. ಹೀಗಾಗಿ, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಆಕ್ರೋಶಗೊಂಡಿದ್ದಾರೆ, ತಮ್ಮ ಹಕ್ಕುಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆನಡಾದ ಹಲವು ನಗರಗಳಲ್ಲಿ ಈ ಪ್ರತಿಭಟನೆ ನಡೆದಿದೆ.
ಒಂಟಾರಿಯೊ, ಮ್ಯಾನಿಟೋಬಾ, ಪ್ರಿನ್ಸ್ ಎಡ್ವರ್ಡ್ ಐಲ್ಯಾಂಡ್ ಹಾಗೂ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಹಾಗೂ ನೌಕರರು ಪ್ರತಿಭಟನೆ ನಡೆಸಿದ್ದಾರೆ.
ಕೆನಡಾ ದೇಶದಲ್ಲಿ ವಲಸಿಗರು ಹೆಚ್ಚಾಗುತ್ತಿರುವ ಕಾರಣ ವಸತಿ, ಆರೋಗ್ಯ ಹಾಗೂ ಇನ್ನಿತರ ಸೇವಾ ವಲಯಗಳು ಸಾಕಷ್ಟು ಒತ್ತಡದಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ ವಲಸಿಗರ ನಿಯಂತ್ರಣಕ್ಕೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಂಡಿದ್ದಾರೆ. ಅದರಲ್ಲೂ ಕುಶಲಕರ್ಮಿಗಳಲ್ಲದ ಕೆಲಸಗಾರರು ಹಾಗೂ ನಿರಾಶ್ರಿತರಿಗೆ ಪೌರತ್ವ ನೀಡೋದನ್ನ ಶೇ. 35ರಷ್ಟು ಕಡಿತ ಮಾಡಲಾಗಿದೆ ಎಂದು ತಿಳಿದು ಬಂದಿದೆ.