ವಾಷಿಂಗ್ಟನ್, ಆ.31(DaijiworldNews/AA): ಅಪಾರ್ಟ್ಮೆಂಟ್ವೊಂದರಲ್ಲಿ ದರೋಡೆ ಮಾಡುವಾಗ ಅಲ್ಲಿದ್ದ ನೇಪಾಳಿ ವಿದ್ಯಾರ್ಥಿನಿಯನ್ನು ಭಾರತೀಯ ಮೂಲದ ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಅಮೆರಿಕದಲ್ಲಿ ಸಂಭವಿಸಿದೆ.
ಬಾಬಿ ಸಿನ್ಹ್ ಶಾ(52) ಎಂಬಾತ ನೇಪಾಳ ಮೂಲದ ಮುನಾ ಪಾಂಡೆ (21) ಎಂಬ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿದ್ದಾನೆ.
ಸೋಮವಾರ ಸಂಜೆ 5:30 ರ ಸುಮಾರಿಗೆ ಸಮುದಾಯ ಕಾಲೇಜು ವಿದ್ಯಾರ್ಥಿನಿ ಮುನಾ ಪಾಂಡೆ ತನ್ನ ಹೂಸ್ಟನ್ ಅಪಾರ್ಟ್ಮೆಂಟ್ನಲ್ಲಿ ಗುಂಡೇಟಿಗೆ ಹತ್ಯೆಯಾಗಿದ್ದಾಳೆ. ಅಪಾರ್ಟ್ಮೆಂಟ್ನೊಳಗಿನ ಶವದ ಬಗ್ಗೆ ಅಪರಿಚಿತ ಕರೆ ಬಂದಿತ್ತು. ಆಕೆಯ ಅಪಾರ್ಟ್ಮೆಂಟ್ ಸಂಕೀರ್ಣದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕಾಗಮಿಸಿದಾಗ ಆಕೆ ಸಾವನ್ನಪ್ಪಿರುವುದು ತಿಳಿದುಬಂದಿದೆ.
ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿ ಬಾಬಿ ಶಾ ನನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಹತ್ಯೆಯಾದ ಪಾಂಡೆ 2021 ರಲ್ಲಿ ನೇಪಾಳದಿಂದ ಹೂಸ್ಟನ್ ಸಮುದಾಯ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಬಂದಿದ್ದರು. ಆಕೆಯ ತಾಯಿ ಅವಳೊಂದಿಗೆ ಅಪಾರ್ಟ್ಮೆಂಟ್ನಲ್ಲಿ ಇರಲು ಬಯಸಿದ್ದರು. ಅಷ್ಟರಲ್ಲಾಗಲೇ ಈ ಅವಘಡ ಸಂಭವಿಸಿದೆ ಎಂದು ಹೂಸ್ಟನ್ನ ನೇಪಾಳಿ ಅಸೋಸಿಯೇಷನ್ ಸದಸ್ಯರು ಮಾಹಿತಿ ನೀಡಿದ್ದಾರೆ.