ಇಸ್ಲಾಮಾಬಾದ್, ಅ.14(DaijiworldNews/AA): ಅಕ್ಟೋಬರ್ 15 ಹಾಗೂ 16 ರಂದು ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಎಸ್ಸಿಒ ಶೃಂಗಸಭೆ ಹಿನ್ನೆಲೆ ಎರಡು ದಿನಗಳ ಕಾಲ ಲಾಕ್ಡೌನ್ ಘೋಷಿಸಲಾಗಿದೆ. ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮದುವೆಗಳಿಗೂ ನಿಷೇಧ ಹೇರಲಾಗಿದೆ.
ಬೇರೆ ಬೇರೆ ದೇಶಗಳಿಂದ ಗಣ್ಯರು ಆಗಮಿಸಲಿರುವ ಹಿನ್ನೆಲೆ ಭದ್ರತೆ ದೃಷ್ಟಿಯಿಂದ ಲಾಕ್ಡೌನ್ ಘೋಷಿಸಲಾಗಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಚೀನಾದ ಪ್ರಧಾನಿ ಲಿ ಕಿಯಾಂಗ್ ಸೇರಿದಂತೆ ಹಲವು ಪ್ರಮುಖ ನಾಯಕರು ಈ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಇಮ್ರಾನ್ ಖಾನ್ ಅವರ ಪಕ್ಷದ ಬೆಂಬಲಿಗರ ಇತ್ತೀಚಿನ ಭಯೋತ್ಪಾದಕ ದಾಳಿಗಳು ಮತ್ತು ರಾಜಕೀಯ ಪ್ರತಿಭಟನೆಗಳಿಂದಾಗಿ ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ಮಿಲಿಟರಿ ನಿಯಂತ್ರಣದಲ್ಲಿ ಭದ್ರತೆಯನ್ನು ಇರಿಸಲು ಪಾಕಿಸ್ತಾನದ ಸರ್ಕಾರ ತೀರ್ಮಾನಿಸಿದೆ. ಪಾಕಿಸ್ತಾನ ಸೇನೆಯ ಸುಮಾರು 10,000 ಸೈನಿಕರು ಮತ್ತು ಕಮಾಂಡೋಗಳನ್ನು ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ನಿಯೋಜಿಸಲಾಗಿದೆ. ಇನ್ನು ಸ್ಥಳೀಯ ಪೊಲೀಸರು ಮತ್ತು ಇತರ ಭದ್ರತಾ ಪಡೆಗಳು ಈಗ ನೇರವಾಗಿ ಮಿಲಿಟರಿಯಿಂದ ಆದೇಶಗಳನ್ನು ತೆಗೆದುಕೊಳ್ಳಲಿವೆ ಎನ್ನಲಾಗಿದೆ.
ಅಕ್ಟೋಬರ್ 12 ರಿಂದ 16 ರವರೆಗೆ ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ಮದುವೆ ಹಾಲ್ಗಳು, ಕೆಫೆಗಳು, ರೆಸ್ಟೋರೆಂಟ್ಗಳು ಮತ್ತು ಸ್ನೂಕರ್ ಕ್ಲಬ್ಗಳನ್ನು ಮುಚ್ಚಲು ಆದೇಶ ಹೊರಡಿಸಲಾಗಿದೆ. ವ್ಯಾಪಾರಸ್ಥರು ಹಾಗೂ ಹೊಟೇಲ್ ಮಾಲಕರು ಇದನ್ನು ಪಾಲಿಸದಿದ್ದರೆ ಕಾನೂನು ರೀತಿಯ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.