ಇಸ್ಲಾಮಾಬಾದ್, ಅ.16(DaijiworldNews/AA): ಎರಡು ದೇಶಗಳ ನಡುವೆ ವಿಶ್ವಾಸದ ಕೊರತೆಯಿದ್ದರೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ನಡೆಯುತ್ತಿರುವ ಎಸ್ಸಿಒ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎರಡು ರಾಷ್ಟ್ರಗಳ ನಡುವಿನ ಗಡಿಯಾಚೆಗಿನ ಚಟುವಟಿಕೆಗಳು ಉಗ್ರವಾದ ಮತ್ತು ಪ್ರತ್ಯೇಕತಾವಾದದಿಂದ ಕೂಡಿದ್ದರೆ, ಅದು ದ್ವಿಪಕ್ಷೀಯ ವ್ಯಾಪಾರ, ಸಂಬಂಧಗಳಿಗೆ ಸಹಕಾರಿಯಲ್ಲ. ಅಭಿವೃದ್ಧಿ ಮತ್ತು ಬೆಳವಣಿಗೆಗೆ ಶಾಂತಿ ಮತ್ತು ಸ್ಥಿರತೆಯ ಅಗತ್ಯವಿದೆ ಎಂಬುದು ಮೂಲತತ್ವವಾಗಿದೆ ಎಂದು ತಿಳಿಸಿದರು.
ಏಕಪಕ್ಷೀಯ ಅಜೆಂಡಾಗಳ ಮೂಲಕ ಸಂಬಂಧಗಳು ಪ್ರಗತಿ ಹೊಂದಲು ಸಾಧ್ಯವಿಲ್ಲ. ಅಭಿವೃದ್ಧಿ ಮತ್ತು ಪ್ರಗತಿಗೆ ಶಾಂತಿ ಮತ್ತು ಸ್ಥಿರತೆ ಅಗತ್ಯ ಎಂಬುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು. ಈ ಕೆಲಸಗಳು ಆಗದಿದ್ದರೆ ಅಭಿವೃದ್ಧಿಯ ಮಾತೇ ಇಲ್ಲ ಎಂದರು.
ಜೈಶಂಕರ್ ಅವರು 9 ವರ್ಷಗಳ ನಂತರ ಪಾಕಿಸ್ತಾನಕ್ಕೆ ಭೇಟಿ ನೀಡಿದ ವಿದೇಶಾಂಗ ಸಚಿವರಾಗಿದ್ದಾರೆ. ಈ ಮೊದಲು ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ಸಚಿವರಾಗಿದ್ದಾಗ 2015ರ ಡಿಸೆಂಬರ್ನಲ್ಲಿ ಇಸ್ಲಾಮಾಬಾದ್ಗೆ ಭೇಟಿ ನೀಡಿದ್ದರು.