ಒಟ್ಟಾವಾ, ಅ.25(DaijiworldNews/AA): ಕೆನಡಾದ ಅಲ್ಬರ್ಟಾದಲ್ಲಿ ಖಲಿಸ್ತಾನಿ ಬೆಂಬಲಿಗನೊಬ್ಬ ಕತ್ತಿಯಿಂದ ದಾಳಿ ಮಾಡಲು ಯತ್ನಿಸಿದ್ದ. ಆತ ಬೀಸಿದ್ದ ಕತ್ತಿಯು ತಮ್ಮಿಂದ ಕೆಲವೇ ಇಂಚುಗಳಷ್ಟು ಹತ್ತಿರದಲ್ಲಿ ಹೋಗಿತ್ತು ಎಂದು ಕೆನಡಾದಲ್ಲಿ ಭಾರತದ ರಾಯಭಾರಿಯಾಗಿದ್ದ ಸಂಜಯ್ ಕುಮಾರ್ ವರ್ಮಾ ಅವರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, 'ನಮ್ಮ ಮೇಲೆ ಹಲ್ಲೆ ನಡೆಸಲು ಹಲವು ಬಾರಿ ಪ್ರಯತ್ನ ನಡೆದಿತ್ತು. ಖಲಿಸ್ತಾನಿ ಬೆಂಬಲಿಗರು ಕತ್ತಿ ಹಿಡಿದಿರುತ್ತಿದ್ದರು. ಅದು ಕಿರ್ಪಾನ್ (ಸಿಖ್ ಧರ್ಮದಲ್ಲಿ ವಿಶೇಷ ಮಾನ್ಯತೆ ಹೊಂದಿರುವ ಅಸ್ತ್ರ) ಆಗಿರಲಿಲ್ಲ. ಅಲ್ಬರ್ಟಾದಲ್ಲಿ ಇದ್ದಾಗ ಅವರು ಬೀಸಿದ್ದ ಕತ್ತಿ ನನ್ನ ದೇಹದಿಂದ ಕೇವಲ 2-2.5 ಇಂಚಿನಷ್ಟು ಹತ್ತಿರದವರೆಗೂ ಬಂದಿತ್ತು' ಎಂದು ಹೇಳಿದ್ದಾರೆ.
ಇನ್ನು 'ಖಲಿಸ್ತಾನಿಗಳು ಕೆನಡಾದಲ್ಲಿ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಖಲಿಸ್ತಾನ ಹೆಸರಿನಲ್ಲಿ ಮಾನವ ಕಳ್ಳಸಾಗಣೆ, ಮಾದಕವಸ್ತು- ಶಸ್ತ್ರಾಸ್ತ್ರ ಸಾಗಣೆ ಹಾಗೂ ಇತರ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಆ ಕೃತ್ಯಗಳಿಂದ ಹಾಗೂ ಗುರುದ್ವಾರಗಳಿಂದ ಸಾಕಷ್ಟು ಹಣ ಗಳಿಸುತ್ತಿದ್ದಾರೆ. ಆ ಹಣವನ್ನು ದುಷ್ಕೃತ್ಯಗಳಿಗೆ ಬಳಸುತ್ತಿದ್ದಾರೆ' ಎಂದು ಅವರು ಆರೋಪಿಸಿದ್ದರು.