ಫಿಜಿ,ಅ.27(DaijiworldNews/TA):ರವಿಶಂಕರ್ ಗುರೂಜಿಗೆ ಫಿಜಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಕ್ಷಿಣ ಪೆಸಿಫಿಕ್ ರಾಷ್ಟ್ರವಾದ ಫಿಜಿಯು ಮಾನವ ಚೇತನದ ಉನ್ನತಿಗೆ ಮತ್ತು ವಿವಿಧ ಸಮುದಾಯಗಳನ್ನು ಶಾಂತಿ ಮತ್ತು ಸೌಹಾರ್ದತೆಯಲ್ಲಿ ಒಟ್ಟುಗೂಡಿಸಲು ದಣಿವರಿಯದ ಕೊಡುಗೆಗಾಗಿ ತನ್ನ ಅತ್ಯುನ್ನತ ನಾಗರಿಕ ಗೌರವವನ್ನು ನೀಡಿದೆ ಎಂದು ಹೇಳಿದೆ.
ರವಿಶಂಕರ್ ಅವರಿಗೆ ಫಿಜಿ ಗಣರಾಜ್ಯದ ಅಧ್ಯಕ್ಷರಾದ HE ರತು ವಿಲಿಯಮ್ ಎಂ ಕಟೋನಿವೆರೆ ಅವರು 'ಆನರರಿ ಆಫೀಸರ್ ಆಫ್ ದಿ ಆರ್ಡರ್ ಆಫ್ ಫಿಜಿ' ಎಂಬ ಬಿರುದನ್ನು ನೀಡಿದರು. ಸಂತೋಷ ಮತ್ತು ಸಾಮರಸ್ಯವನ್ನು ಹರಡುತ್ತಿರುವ ಆರ್ಟ್ ಆಫ್ ಲಿವಿಂಗ್ ಮೂಲಕ ಜಾಗತಿಕವಾಗಿ ಅವರ ಮಾನವೀಯ ಕಾರ್ಯದ ವಿಶಾಲ ವ್ಯಾಪ್ತಿಯನ್ನು ಗುರುತಿಸಿ, ರವಿಶಂಕರ್ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿದ ವಿಶ್ವದ ಆರನೇ ರಾಷ್ಟ್ರವಾಗಿದೆ ಫಿಜಿ.
ಫಿಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ರವಿಶಂಕರ್ ಅವರು ಫಿಜಿಯ ಉಪ ಪ್ರಧಾನ ಮಂತ್ರಿ ವಿಲಿಯಮ್ ಗವೊಕಾ ಮತ್ತು ಫಿಜಿಯಲ್ಲಿ ಯುಎನ್ ರೆಸಿಡೆಂಟ್ ಕೋಆರ್ಡಿನೇಟರ್ ಡಿರ್ಕ್ ವ್ಯಾಗೆನರ್ ಸೇರಿದಂತೆ ರಾಜ್ಯದ ಗಣ್ಯರೊಂದಿಗೆ ಸಂವಾದ ನಡೆಸಿದರು.