ಮಾಲೆ, ಜೂ08(Daijiworld News/SS): ವಿದೇಶೀ ಗಣ್ಯರಿಗಾಗಿ ಮಾಲ್ದೀವ್ಸ್ ನೀಡುತ್ತಿದ್ದ ಅತ್ಯುನ್ನತ ಗೌರವ ಪೂರ್ವಕವಾದ "ನಿಶಾನ್ ಇಜ್ಜುದ್ದೀನ್" ಪುರಸ್ಕಾರವನ್ನು ಮಾಲ್ದೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೋಹಿಲ್ ಮೋದಿಗೆ ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ಸಚಿವ ಅಬ್ದುಲ್ಲಾ ಶಹೀದ್, ಮೋದಿಗೆ ಸ್ವಾಗತ ಕೋರಿ ನಮಸ್ಕಾರ ಎಂದು ಹೇಳಿದ್ದಾರೆ. ಮಾತ್ರವಲ್ಲ, ನಿಶಾನ್ ಇಜ್ಜುದ್ದೀನ್ ಆಳ್ವಿಕೆಯ ವಿಶಿಷ್ಟ ಪುರಸ್ಕಾರವನ್ನು ಮೋದಿಗೆ ಪ್ರಧಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಹಿಂದೆಯೂ ಭಾರತವು ಮಾಲ್ದೀವ್ಸ್ನಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿತ್ತು. ಸೇನಾ ನೆರವು, ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯ ಕಾರ್ಯಗಳನ್ನು ಕೈಗೊಂಡಿತ್ತು. 1988ರಲ್ಲಿ ಭಾರತವು ಆಪರೇಶನ್ ಕ್ಯಾಕ್ಟಸ್ ಮೂಲಕ ಮಾಲಿಯಲ್ಲಿ ನಡೆದ ದಂಗೆಯನ್ನು ನಿಯಂತ್ರಿಸಿ, ಅಂದಿನ ಅಧ್ಯಕ್ಷ ಗಯೂಮ್ ಅವರನ್ನು ರಕ್ಷಿಸಿತ್ತು.
ಪ್ರಸ್ತುತ ಮಾಲ್ದೀವಿಯನ್ ಡೆಮಾಕ್ರಟಿಕ್ ಪಾರ್ಟಿಯ ಇಬ್ರಾಹಿಂ ಸೋಹಿಲ್ ಅವರು ಅಧ್ಯಕ್ಷರಾಗಿದ್ದು, ಕಳೆದ ವರ್ಷದ ಚುನಾವಣೆ ಸಮಯದಿಂದಲೂ ಚೀನಾವಿರೋಧಿ ನಿಲುವು ಹೊಂದಿದ್ದರು. ಅವರ ಗೆಲುವು ಭಾರತಕ್ಕೂ ನೆಮ್ಮದಿಯ ಸಂಗತಿಯಾಗಿತ್ತು. ಅಧಿಕಾರ ಸ್ವೀಕರಿಸಿದ್ದ ಸೋಹಿಲ್ ಅವರು ತಮ್ಮ ಮೊದಲ ವಿದೇಶೀ ಭೇಟಿಗೆ ಭಾರತವನ್ನೇ ಆಯ್ದುಕೊಂಡಿದ್ದರು. ಅದಾಗಲೇ 300 ಕೋಟಿ ಡಾಲರ್ ಚೀನಾದ ಸಾಲದ ಸುಳಿಯಲ್ಲಿ ಸಿಲುಕಿದ್ದ ಮಾಲ್ದೀವ್ಸ್ಗೆ ಭಾರತವು 140 ಕೋಟಿ ಡಾಲರ್ ಆರ್ಥಿಕ ನೆರವು ಘೋಷಿಸಿತ್ತು.
ಈ ಹಿಂದೆಯೂ ಮೋದಿ ಅವರು ಅಧ್ಯಕ್ಷ ಇಬ್ರಾಹಿಂ ಸೋಹಿಲ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮಾಲ್ದೀವ್ಸ್ಗೆ ತೆರಳಿದ್ದರು. ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಮೋದಿ ಅವರು ತಮ್ಮ ವಿದೇಶ ಪ್ರವಾಸವನ್ನು ಭೂತಾನ್ ಮೂಲಕ ಆರಂಭಿಸಿದ್ದರು.