ಬಿಶ್ಕೆಕ್ , ಜೂ 14 (Daijiworld News/MSP): ಕಿರ್ಗಿಸ್ತಾನದ ಬಿಶ್ಕೆಕ್ ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆ (ಎಸ್ ಸಿಒ)ಯಲ್ಲಿ ಶೃಂಗಸಭೆಯ ಭಾಗವಾಗಿ ಕಿರ್ಜಗಿಸ್ತಾನ್ ಅಧ್ಯಕ್ಷರು ಆಯೋಜಿಸಿದ್ದ ಅನೌಪಚಾರಿಕ ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ.
ಭಾರತದ ಹಾಗೂ ವಿಶ್ವದ ಅನೇಕ ದೇಶಗಳ ವಿನಂತಿಗೆ ತಲೆಕೆಡಿಸಿಕೊಳ್ಳದೆ , ಭಯೋತ್ಪಾದನೆಯನ್ನು ಪರೋಕ್ಷವಾಗಿ ಉತ್ತೇಜಿಸುತ್ತಲೇ ಬಂದಿರುವ ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಏಕಾಂಗಿಯಾಗಿಸಬೇಕು ಎಂದು ಹೇಳುತ್ತಿದ್ದ ಮೋದಿ ಈಗ ಔತಣಕೂಟದಲ್ಲಿ ಅದನ್ನು ಮಾಡಿ ತೋರಿಸಿದ್ದಾರೆ.
ಅನೌಪಚಾರಿಕ ಔತಣಕೂಟಕ್ಕೆ ಉಭಯದೇಶದ ನಾಯಕರೂ ಒಂದೇ ಸಮಯಕ್ಕೆ ಆಗಮಿಸಿ ಮುಖಾಮುಖಿಯಾದರೂ ಪರಸ್ಪರ ಹಸ್ತಲಾಘವ ಮಾಡಿಲ್ಲ. ಮೋದಿ ಪಾಕಿಸ್ತಾನ ಪ್ರಧಾನಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ಪಾಕಿಸ್ತಾನದ ಪ್ರಧಾನಿಗೆ ಜಾಗತಿಕ ನಾಯಕರೆದುರು ತೀವ್ರ ಮುಖಭಂಗ ಉಂಟಾಗಿದೆ. ಈ ಹಿಂದೆಯೇ ಬಿಶ್ಕೆಕ್ ನಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಪಾಕಿಸ್ತಾನದ ಜೊತೆ ಯಾವುದೇ ರೀತಿಯ ದ್ವಿಪಕ್ಷೀಯ ಮಾತುಕತೆ ನಡೆಸುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು.
ಇನ್ನು ಎಸ್ ಸಿಒಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಅವರು ಪರಸ್ಪರ ಭೇಟಿಯಾಗಿದ್ದು, ಮಹತ್ವದ ಸಭೆ ನಡೆಸಿದ್ದಾರೆ. ಅಫ್ಘಾನಿಸ್ತಾನದಲ್ಲಿನ ಅಭಿವೃದ್ದಿಯ ಭಾರತದ ಪಾತ್ರ ಮತ್ತು ಉಭಯ ದೇಶಗಳ ನಡುವಿನ ಸಹಕಾರ ಒಪ್ಪಂದಗಳ ಕುರಿತಂತೆ ಚರ್ಚೆ ನಡೆಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.