ಬಿಷ್ಕೆಕ್, ಜೂ 15 (Daijiworld News/MSP): ಕಿರ್ಗಿಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘದ (ಎಸ್ಸಿಒ) ಶೃಂಗ ಸಭೆಯ ಎರಡನೇ ದಿನ ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಉಭಯಕುಶಲೋಪರಿ ವಿನಿಮಯ ಮಾಡಿಕೊಂಡಿದ್ದಾರೆ. ಆದರೆ ಯಾವುದೇ ರಾಜತಾಂತ್ರಿಕ ಮಾತುಕತೆಗೆ ಭಾರತ ಮುಂದಾಗಿಲ್ಲ. ಕಿರ್ಜಗಿಸ್ತಾನ್ ಅಧ್ಯಕ್ಷರು ಆಯೋಜಿಸಿದ್ದ ಅನೌಪಚಾರಿಕ ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರು. ಉಭಯ ನಾಯಕರೂ ಮುಖಾಮುಖಿಯಾದರೂ ಇಮ್ರಾನ್ ಖಾನ್ ರನ್ನು ಮೋದಿ ನಿರ್ಲಕ್ಷಿಸಿದ್ದರು.
ಶೃಂಗ ಸಭೆಯ ಎರಡನೇ ದಿನ ಕೇವಲ ಔಪಚಾರಿಕವಾಗಿ ಉಭಯಕುಶಲೋಪರಿ ವಿನಿಮಯವಾಗಿದ್ದು ಬಿಟ್ಟರೆ ಬೇರೆ ಯಾವ ಮಾತುಕತೆ ನಡೆದಿಲ್ಲ. ಆದರೆ ರಷ್ಯನ್ ನ್ಯೂಸ್ ಏಜೆನ್ಸಿಯೊಂದಕ್ಕೆ ಇಮ್ರಾನ್ ಖಾನ್ ಸಂದರ್ಶನವೊಂದನ್ನು ನೀಡಿದಾಗ ಭಾರತದೊಂದಿಗೆ ಮಾತುಕತೆ ನಡೆಸುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಇತ್ತೀಚೆಗೆ ತೀರಾ ಕೆಳಮಟ್ಟಕ್ಕೆ ತಲುಪಿದ್ದು, ಪ್ರಧಾನಿ ಮೋದಿ ಅವರಿಗೆ ಇತ್ತೀಚೆಗೆ ದೊರೆತ ಜನಾದೇಶವನ್ನು ಭಾರತ-ಪಾಕ್ ನಡುವೆ ಸೌಹಾರ್ದಯುತ ಸಂಬಂಧ ಏರ್ಪಡಲು ಬಳಸುತ್ತಾರೆ ಎಂದು ಭಾವಿಸಿದ್ದೇನೆ" ಎಂದಿದ್ದರು.
ಇದೇ ವೇಳೆ ಶುಕ್ರವಾರ ಸಭೆಯಲ್ಲಿ ಇಮ್ರಾನ್ ಖಾನ್ ಎದುರಲ್ಲೇ ಮಾತನಾಡಿದ್ದ ಮೋದಿ , "ಉಗ್ರರಿಗೆ ನೆರವು, ಉತ್ತೇಜನ ಮತ್ತು ಬೆಂಬಲ ನೀಡುತ್ತಿರುವ ದೇಶಗಳನ್ನೇ ಉಗ್ರ ಕೃತ್ಯಗಳಿಗೆ ಹೊಣೆ ಮಾಡಬೇಕು ಎಂದು ನೆರೆ ದೇಶಕ್ಕೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ. ಅಷ್ಟೇ ಅಲ್ಲ, ಉಗ್ರವಾದವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಾಗತಿಕ ಸಮ್ಮೇಳನ ನಡೆಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ್ದರು.