ನವದೆಹಲಿ, ಜೂ 15 (Daijiworld News/MSP): ಸ್ನ್ಯಾಪ್ಚ್ಯಾಟ್ನಲ್ಲಿ ನಾಯಿಮರಿ, ಬೆಕ್ಕು ಅಥವಾ ಮೊಲದ ರೀತಿ ಕಾಣುವಂತೆ, ವಿವಿಧ ರೀತಿಯ ಕೂಲಿಂಗ್ ಗ್ಲಾಸಸ್ ಧರಿಸಿರೋ ರೀತಿಯಲ್ಲಿ ಫಿಲ್ಟರ್ಸ್ ಬಳಸಿ ಜನರು ಫನ್ನಿ ವಿಡಿಯೋಗಳನ್ನ ಮಾಡ್ತಾರೆ. ಹೊಸ ಫಿಲ್ಟರ್ ಬಂದಾಗಲೆಲ್ಲಾ ಜನ ಅದನ್ನ ಟ್ರೈ ಮಾಡ್ತಾರೆ. ಆದರೆ ಇದೇ ಫಿಲ್ಟರ್ ನಿಂದ ಪಾಕ್ ಇದೀಗ ಮುಜುಗರಕ್ಕೀಡಾಗಿದೆ.
ಗಂಭೀರ ವಿಚಾರವಿರುವ ಸರ್ಕಾರಿ ಪತ್ರಿಕಾಗೋಷ್ಟಿಯಲ್ಲಿ ಕ್ಯಾಟ್ ಫಿಲ್ಟರ್ ಬಳಸಿ ಪಾಕ್ ಇದೀಗ ನಗೆಪಾಟಲಿಗೀಡಾಗಿದೆ. ಪಾಕಿಸ್ತಾನದ ಖೈಬರ್ ಪಾಖ್ಟುನ್ಕ್ವಾದ ಪ್ರಾಂತೀಯ ಸರ್ಕಾರ ಫೇಸ್ಬುಕ್ನಲ್ಲಿ ಪತ್ರಿಕಾಗೋಷ್ಟಿಯನ್ನು ನೇರ ಪ್ರಸಾರ ಮಾಡುವ ಸಂದರ್ಭದಲ್ಲಿ , ಕ್ಯಾಟಿನ ಫಿಲ್ಟರ್ನೊಂದಿಗೆ ಸ್ಟ್ರೀಮಿಂಗ್ ಮಾಡಿದೆ. ಇದು ಪಿಟಿಐ ಪಕ್ಷದ ಅಧಿಕೃತ ಪೇಜ್ನಲ್ಲೇ ಪ್ರಸಾರವಾಗಿ ಈ ಯಡವಟ್ಟು ಕಂಡು ಜನ ಒಂದು ಕ್ಷಣ ಗೊಂದಲಕ್ಕೊಳಗಾಗಿದ್ದಾರೆ.
ಸರ್ಕಾರದ ಪತ್ರಿಕಾಗೋಷ್ಟಿಯು ಗಾಂಭೀರ್ಯತೆಯಿಂದ ಇರುವಂಥದ್ದಾಗಿದೆ. ಆದರೆ ನೇರ ಪ್ರಸಾರದಲ್ಲಿ ರಾಜಕಾರಣಿಗಳು ಕಾರ್ಟೂನ್ಗಳಂತೆ ಕಂಡು ಇದೀಗ ಎಲ್ಲೆಡೆ ಟ್ರೋಲ್ ಆಗುತ್ತಿದೆ. ರಾಜಕಾರಣಿಗಳ ಬೆಕ್ಕಿನ ಮುಖ ಕಂಡು ಜನ ಅಪಹಾಸ್ಯ ಮಾಡುತ್ತಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ಸಚಿವ ಶೌಕತ್ ಯೂಸಾಫ್ಝೈ ಕ್ಯಾಬಿನೆಟ್ನಲ್ಲಿ ತೆಗೆದುಕೊಳ್ಳಲಾದ ನಿರ್ಣಯಗಳ ಬಗ್ಗೆ ವಿವರಿಸುತ್ತಿದ್ದರು. ಈ ಸಂದರ್ಭ ಅವರ ತಲೆ ಮೇಲೆ ಎರಡು ಕಿವಿ ಹಾಗೂ ಬೆಕ್ಕಿನ ಮೀಸೆಗಳು ಬಂದು ಕಾರ್ಟೂನ್ ಪಾತ್ರಧಾರಿಯಂತೆ ಕಂಡಿದ್ದಾರೆ. ಅವರ ಅಕ್ಕಪಕ್ಕದಲ್ಲಿ ಕುಳಿತ್ತಿದ್ದವರ ಮೇಲೂ ಈ ಇಫೆಕ್ಟ್ ಬಿದ್ದಿದೆ. ಲೈವ್ ವೀಕ್ಷಿಸುತ್ತಿದ್ದ ಜನರು ಇದನ್ನು ಗಮನಿಸಿ ತಕ್ಷಣ ಪೇಜ್ ಅಡ್ಮಿನ್ಗಳಿಗೆ ತಿಳಿಸಿದ್ದಾರೆ. ಕಮೆಂಟ್ ಮೂಲಕ, ಬೆಕ್ಕಿನ ಫಿಲ್ಟರ್ ತೆಗೆಯಿರಿ ಎಂದು ಎಚ್ಚರಿಸಿದ್ದಾರೆ.