ವೆಲ್ಲಿಂಗ್ಟನ್, ಜೂ16(Daijiworld News/SS): ಇಂದು ಮುಂಜಾನೆ ವೇಳೆ ನ್ಯೂಜಿಲೆಂಡ್'ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಬರೊಬ್ಬರಿ 7.4ರಷ್ಟು ತೀವ್ರತೆ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಉತ್ತರ ನ್ಯೂಜಿಲೆಂಡ್'ನ ಕರ್ಮೆಡೆಕ್ ದ್ವೀಪದ ಸುಮಾರು 34 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ದಾಖಲಾದ ಅತ್ಯಂತ ದೊಡ್ಡ ಪ್ರಮಾಣದ ಭೂಕಂಪನವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಮುದ್ರದಲ್ಲಿ ಸಣ್ಣ ಮಟ್ಟದ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ. ಆದರೆ ಈ ಅಲೆಗಳು ದೊಡ್ಡ ಪ್ರಮಾಣದ ಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭೂಕಂಪನ ಸಂಭವಿಸಿದ ಬಳಿಕ ಭೂಕಂಪನ ಸರ್ವೇಕ್ಷಣಾ ಇಲಾಖೆ ಸುನಾಮಿ ಎಚ್ಚರಿಕೆ ನೀಡಿತ್ತು. ಆದರೆ ಕೆಲ ಹೊತ್ತಿನ ಬಳಿಕ ಫೆಸಿಫಿಕ್ ಸುನಾಮಿ ಎಚ್ಚರಿಕಾ ಕೇಂದ್ರ ಸುನಾಮಿ ಎಚ್ಚರಿಕೆಯನ್ನು ವಾಪಸ್ ಪಡೆದಿದೆ.
ಡುನೆದಿನ್ ಮತ್ತು ವೆಲ್ಲಿಂಗ್ಟನ್'ನ ಉತ್ತರ-ದಕ್ಷಿಣ ಭಾಗದಲ್ಲಿ ಕಂಪನದ ವರದಿಯಾಗಿದೆ. 2011ರಲ್ಲಿ ಪೂರ್ವ ಕರಾವಳಿಯಲ್ಲಿ ಸಂಭವಿಸಿದ ಭೂಕಂಪನದಿಂದ 185 ಮಂದಿ ಸಾವಿಗೀಡಾಗಿದ್ದರು.