ಲಂಡನ್,ಜೂ24(DaijiworldNews/AZM):ಅಮೆರಿಕವು ಇರಾನ್ ವಿರುದ್ಧ ಸೈಬರ್ ದಾಳಿಗಳು ನಡೆಸುತ್ತಿದ್ದು,ಇದು ಯಶಸ್ವಿಯಾಗಿಲ್ಲ ಎಂದು ಇರಾನ್ನ ಟೆಲಿಕಾಮ್ ಸಚಿವರಾದ ಮುಹಮ್ಮದ್ ಜಾವೇದ್ ಅಝರಿ ಜಹ್ರೂಮಿ ಇಂದು ತಿಳಿಸಿದ್ದಾರೆ.
ಇರಾನ್ನ ರಾಕೆಟ್ ಉಡಾವಕ ವ್ಯವಸ್ಥೆಗಳನ್ನು ವಿಫಲಗೊಳಿಸಲು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ದೀರ್ಘಾವಧಿಯ ಸೈಬರ್ ದಾಳಿ ಯೋಜನೆಯನ್ನು ಆರಂಭಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಪೆಂಟಗನ್ ಗುರುವಾರ ದೀರ್ಘಾವಧಿಯ ಸೈಬರ್ ದಾಳಿಯನ್ನು ಆರಂಭಿಸಿದೆ ಎಂಬುದಾಗಿ ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು..
ಸೈಬರ್ ದಾಳಿಯು ಇರಾನ್ನ ರಾಕೆಟ್ ಉಡಾವಣಾ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದೆ ಎಂಬುದಾಗಿ 'ವಾಶಿಂಗ್ಟನ್ ಪೋಸ್ಟ್' ಶನಿವಾರ ವರದಿ ಮಾಡಿರುವುದನ್ನು ಸ್ಮರಿಸಬಹುದಾಗಿದೆ.
''ಅವರು ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಆದರೆ, ಅವರು ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿಲ್ಲ'' ಎಂದು ಇರಾನ್ ಟೆಲಿಕಾಮ್ ಸಚಿವರು 'ಟ್ವಿಟರ್'ನಲ್ಲಿ ಹೇಳಿದ್ದಾರೆ.
''ಇರಾನ್ ವಿರುದ್ಧ ನಡೆಸಲಾಗುತ್ತಿದೆಯೆನ್ನಲಾದ ಸೈಬರ್ ದಾಳಿಗಳು ಸತ್ಯವೇ ಎಂಬುದಾಗಿ ಮಾಧ್ಯಮಗಳು ಕೇಳಿವೆ. ಕಳೆದ ವರ್ಷ ನಾವು 3.3 ಲಕ್ಷ ಸೈಬರ್ ದಾಳಿಗಳನ್ನು ಹಿಮ್ಮೆಟ್ಟಿಸಿದ್ದೇವೆ'' ಎಂದರು.