ವಾಷಿಂಗ್ಟನ್, ಆ. 12 (DaijiworldNews/AK):ಮಾಂಟಾನಾ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನಕ್ಕೆ ಮತ್ತೊಂದು ವಿಮಾನ ಡಿಕ್ಕಿ ಹೊಡೆದ ಪರಿಣಾಮ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ನಾಲ್ಕು ಜನರನ್ನು ಹೊತ್ತೊಯ್ಯುತ್ತಿದ್ದ ಸಿಂಗಲ್ ಎಂಜಿನ್ ವಿಮಾನವು ಕಾಲಿಸ್ಪೆಲ್ ನಗರ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿತ್ತು ಎಂದು ಕಾಲಿಸ್ಪೆಲ್ ಪೊಲೀಸ್ ಮುಖ್ಯಸ್ಥ ಜೋರ್ಡಾನ್ ವೆನೆಜಿಯೊ ಮತ್ತು ಫೆಡರಲ್ ವಿಮಾನಯಾನ ಆಡಳಿತ ತಿಳಿಸಿದೆ.
ಸೊಕಾಟಾ ಟಿಬಿಎಂ 700 ಟರ್ಬೊಪ್ರೊಪ್ ವಿಮಾನವು, ನಿಲ್ದಾಣದಲ್ಲಿ ನಿಂತಿದ್ದ ಫ್ಲೈಟ್ಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಉಂಟಾದ ಬೆಂಕಿಯು ಹುಲ್ಲಿನ ಪ್ರದೇಶಕ್ಕೆ ಹರಡಿತು ಎಂದು ವೆನೆಜಿಯೊ ತಿಳಿಸಿದ್ದಾರೆ. ನಗರದ ಒಡೆತನದ ಈ ಸಣ್ಣ ವಿಮಾನ ನಿಲ್ದಾಣವು ವಾಯುವ್ಯ ಮೊಂಟಾನಾದಲ್ಲಿರುವ ಸುಮಾರು 30,000 ಜನವಸತಿಯ ಕಾಲಿಸ್ಪೆಲ್ನ ದಕ್ಷಿಣದಲ್ಲಿದೆ.
ದಕ್ಷಿಣದಿಂದ ವಿಮಾನವೊಂದು ಬಂದು ರನ್ವೇಯ ಕೊನೆಯಲ್ಲಿ ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇಳಿಯಲು ಪ್ರಯತ್ನಿಸುತ್ತಿದ್ದ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿತು. ಆದರೆ ಅದು ನಿಂತ ನಂತರ ಪೈಲಟ್ ಮತ್ತು ಮೂವರು ಪ್ರಯಾಣಿಕರು ಸುರಕ್ಷಿತವಾಗಿ ಇಳಿದರು.