ವಾಷಿಂಗ್ಟನ್, ಆಗಸ್ಟ್ 28 (Daijiworld News/TA): ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವರೊ, ರಷ್ಯಾ-ಉಕ್ರೇನ್ ಯುದ್ಧದ ಬೆನ್ನಲ್ಲೇ ಭಾರತವನ್ನು ಗುರಿ ಮಾಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರು, "ಇದು ಮೋದಿಯ ಯುದ್ಧ" ಎಂದು ಹೇಳಿದ್ದಾರೆ.

ಬ್ಲೂಮ್ಬರ್ಗ್ ಟಿವಿಗೆ ನೀಡಿದ ಸಂದರ್ಶನದಲ್ಲಿ ನವರೊ, “ಶಾಂತಿಯ ದಾರಿ ಭಾರತದ ಮೂಲಕ ಹೋಗುತ್ತದೆ” ಎಂದು ಹೇಳಿದ್ದು, ಭಾರತ ತನ್ನ ತೈಲ ಖರೀದಿ ನೀತಿಯನ್ನು ಬದಲಾಯಿಸಿದರೆ ಮಾತ್ರ ರಷ್ಯಾ-ಉಕ್ರೇನ್ ಯುದ್ಧಕ್ಕೆ ಬ್ರೇಕ್ ಹಾಕಬಹುದು ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದರೆ, ಅಮೆರಿಕ ಭಾರತಕ್ಕೆ ವಿಧಿಸಿರುವ ಶೇ.50ರಷ್ಟು ಸುಂಕವನ್ನು ಶೇ.25ರಷ್ಟುಕ್ಕ್ಕೆ ಇಳಿಸಬಹುದು ಎಂದು ಒತ್ತಡ ಹಾಕಿದ್ದಾರೆ.
ಈ ಮಧ್ಯೆ, ಅಮೆರಿಕ ಭಾರತದ ಮೇಲಿನ ರಫ್ತು ಸುಂಕವನ್ನು ಶೇ.50ರಷ್ಟು ಗರಿಷ್ಠ ಮಟ್ಟಕ್ಕೆ ಏರಿಸಿರುವುದು ಗಂಭೀರ ಆರ್ಥಿಕ ಪರಿಣಾಮ ಬೀರುತ್ತದೆ. ಜವಳಿ, ಆಭರಣ ಮುಂತಾದ ಉದ್ಯಮಗಳಿಗೆ ಇದರಿಂದ ತೀವ್ರ ಹೊಡೆತವಾಗಿದೆ. ತಾತ್ಕಾಲಿಕವಾಗಿ, ಎಲೆಕ್ಟ್ರಾನಿಕ್ಸ್ ಮತ್ತು ಔಷಧಗಳಿಗೆ ವಿನಾಯಿತಿ ನೀಡಲಾಗಿದೆ.
ನವರೊ ಅವರ ಆಕ್ಷೇಪಣೆ ಪ್ರಕಾರ, ಭಾರತ ರಷ್ಯಾದಿಂದ ತೈಲ ಖರೀದಿಸುವ ಮೂಲಕ, ಮಾಸ್ಕೋಗೆ ಯುದ್ಧ ನಡೆಯಿಸಲು ಹಣಕಾಸು ನೆರವು ಒದಗಿಸುತ್ತಿದೆ. ಇದರ ಪರಿಣಾಮವಾಗಿ, ಉಕ್ರೇನ್ಗೆ ಬೆಂಬಲ ನೀಡುತ್ತಿರುವ ಅಮೆರಿಕದ ತೆರಿಗೆದಾರರು ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಪ್ರತಿಸ್ಪಂದನವಾಗಿ, ಭಾರತ ತನ್ನ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ದೇಶದ ಆರ್ಥಿಕ ಹಿತ ಹಾಗೂ ಜನರ ಮೇಲೆ ಬೆಲೆ ಏರಿಕೆಯ ಹೊರೆ ತಗ್ಗಿಸಲು ರಷ್ಯಾದ ತೈಲ ಖರೀದಿ ಅಗತ್ಯ ಎಂದು ಹೇಳಿದೆ. ಭಾರತವು ತನ್ನ ಸಾರ್ವಭೌಮ ನಿರ್ಣಯದ ಹಕ್ಕು ಬಳಸಿಕೊಳ್ಳುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದೆ.
ಪೀಟರ್ ನವರೊ ಅವರ "ಭಾರತ ದುರಹಂಕಾರದ ತೊಳಲಲ್ಲಿದೆ" ಎಂಬ ಹೇಳಿಕೆಯಿಂದಾಗಿ, ಇನ್ನು ಮುಂದಿನ ದಿನಗಳಲ್ಲಿ ಭಾರತ-ಅಮೆರಿಕ ಸಂಬಂಧಗಳು ಏನಾಗಲಿವೆ ಎಂಬುದರ ಕುರಿತಾಗಿ ಅನೇಕ ಅನುಮಾನಗಳು ಮೂಡಿವೆ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವೆಂದು ನವರೊ ಒಪ್ಪಿಕೊಂಡರೂ, ಅದು ಆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ತಕ್ಕಂತೆ ವರ್ತಿಸಬೇಕೆಂದು ಅವರು ತೀವ್ರ ಹೇಳಿಕೆ ನೀಡಿದ್ದಾರೆ.