ಟೋಕಿಯೋ, ಆ 29 (DaijiworldNews/TA): ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಟೋಕಿಯೋಗೆ ಆಗಮಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಸ್ಥಳೀಯ ಭಾರತೀಯ ಸಮುದಾಯದಿಂದ ಉತ್ಸಾಹಭರಿತ ಸ್ವಾಗತ ಲಭಿಸಿದ್ದು, ಅನೇಕರು ಅವರನ್ನು ನೇರವಾಗಿ ನೋಡಲು ಉತ್ಸುಕತೆಯಿಂದ ಕಾದಿದ್ದರು.

ಇಂದು ಪ್ರಧಾನಿ ಮೋದಿ ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದ್ದು, ಉಭಯ ರಾಷ್ಟ್ರಗಳ ನಡುವೆ ಅನೇಕ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. 2 ದಿನಗಳ ಜಪಾನ್ ಭೇಟಿಯ ಅವಧಿಯಲ್ಲಿ, ಪ್ರಧಾನಿ ಕೈಗಾರಿಕೋದ್ಯಮಿಗಳ ಜೊತೆಗೂ, ಪ್ರಮುಖ ರಾಜಕೀಯ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಭಾರತ-ಜಪಾನ್ ಸಹಕಾರವನ್ನು ಮತ್ತಷ್ಟು ಗಟ್ಟಿ ಮಾಡುವ ಪ್ರಯತ್ನದಲ್ಲಿ, ಜಪಾನ್ ಸರ್ಕಾರವು ಭಾರತದಲ್ಲಿ 10 ಟ್ರಿಲಿಯನ್ ಯೆನ್ (ಅಂದಾಜು USD 68 ಬಿಲಿಯನ್ ಅಥವಾ ₹5.6 ಲಕ್ಷ ಕೋಟಿ) ಹೂಡಿಕೆಗೆ ಗುರಿ ಇಡುವ ಸಾಧ್ಯತೆ ಇದೆ ಎಂದು ಮೂಲಗಳು ಸೂಚಿಸುತ್ತಿವೆ. ಈ ಹೂಡಿಕೆ ಮೂಲಭೂತ ಸೌಕರ್ಯ, ತಂತ್ರಜ್ಞಾನ ಮತ್ತು ಹಸಿರು ಕೈಗಾರಿಕಾಕ್ಷೇತ್ರಗಳ ಕಡೆಗೆ ಕೇಂದ್ರೀಕೃತವಾಗಿರಲಿದೆ.
ಜಪಾನ್ ಭೇಟಿಯ ನಂತರ, ಪ್ರಧಾನಿ ಮೋದಿ ಆಗಸ್ಟ್ 31 ರಿಂದ ಸೆಪ್ಟೆಂಬರ್ 1 ರವರೆಗೆ ಚೀನಾದ ಟಿಯಾಂಜಿನ್ ನಗರಕ್ಕೆ ತೆರಳಲಿದ್ದಾರೆ. ಅಲ್ಲಿ ಅವರು ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ, ಅಲ್ಲಿ ಭಾಗವಹಿಸುವ ಪ್ರಮುಖ ನೇತಾರರೊಂದಿಗೆ ಬಹುಪಕ್ಷೀಯ ಮಾತುಕತೆಗಳ ನಿರೀಕ್ಷೆಯಿದೆ.