ಟೋಕಿಯೊ, ಆ. 29 (DaijiworldNews/AK):ಭಾರತದ ಬೆಳವಣಿಗೆಯ ಪ್ರಯಾಣದಲ್ಲಿ ಜಪಾನ್ ಪ್ರಮುಖ ಪಾಲುದಾರ. ಉತ್ಪಾದನೆ, ತಂತ್ರಜ್ಞಾನ, ಹಸಿರು ಇಂಧನ, ಮೂಲಸೌಕರ್ಯ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಉಭಯ ದೇಶಗಳ ಪಾಲುದಾರಿಕೆ ಬಗ್ಗೆ ಮೋದಿ ಬಣ್ಣಿಸಿದ್ದಾರೆ.

ಜಪಾನ್ ಭೇಟಿಯ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ-ಜಪಾನ್ ಸಂಬಂಧಗಳನ್ನು ಬಲಪಡಿಸಲು ಸಮಗ್ರ 5 ಅಂಶಗಳ ಮಾರ್ಗಸೂಚಿಯನ್ನು ವಿವರಿಸಿದ್ದಾರೆ. ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಜಪಾನ್ ಪ್ರಮುಖ ಪಾಲುದಾರ ಎಂದು ಮೋದಿ ಗಮನ ಸೆಳೆದಿದ್ದಾರೆ.
ಜಪಾನ್ ತಂತ್ರಜ್ಞಾನದಲ್ಲಿ ಶಕ್ತಿ ಕೇಂದ್ರವಾಗಿದ್ದರೆ, ಭಾರತ ಪ್ರತಿಭೆಯ ಶಕ್ತಿ ಕೇಂದ್ರವಾಗಿದೆ. ತಂತ್ರಜ್ಞಾನ ಮತ್ತು ಪ್ರತಿಭೆ ಮಾತ್ರ ಅಭಿವೃದ್ಧಿಗೆ ಕಾರಣವಾಗಬಹುದು. ಭಾರತ ಮತ್ತು ಜಪಾನ್ ನಡುವೆ ಸಹಕಾರದ ಅಪಾರ ಸಾಧ್ಯತೆಗಳಿವೆ. ವ್ಯಾಪಾರ ಜಗತ್ತಿನ ದೈತ್ಯರೊಂದಿಗೆ ಪ್ರಾರಂಭವಾಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
ಮೆಟ್ರೋದಿಂದ ಉತ್ಪಾದನೆಯ ವರೆಗೆ, ಸೆಮಿಕಂಡಕ್ಟರ್ನಿಂದ ಸ್ಟಾರ್ಟ್ಅಪ್ಗಳ ವರೆಗೆ ಪ್ರತಿಯೊಂದು ಕ್ಷೇತ್ರದಲ್ಲಿ ನಮ್ಮ ಪಾಲುದಾರಿಕೆ ಪರಸ್ಪರ ನಂಬಿಕೆಯ ಸಂಕೇತವಾಗಿದೆ. ಜಪಾನಿನ ಕಂಪನಿಗಳು ಭಾರತದಲ್ಲಿ 40 ಶತಕೋಟಿ ಡಾಲರ್ಗಳಿಗಿಂತ ಹೆಚ್ಚು ಹೂಡಿಕೆ ಮಾಡಿವೆ. ಕಳೆದ 2 ವರ್ಷಗಳಲ್ಲಿ ಮಾತ್ರ 30 ಶತಕೋಟಿ ಡಾಲರ್ಗಳ ಖಾಸಗಿ ಹೂಡಿಕೆ ನಡೆದಿದೆ ಎಂದು ವಿವರಿಸಿದ್ದಾರೆ.