ಬೀಜಿಂಗ್, ಆ. 31 (DaijiworldNews/AA): ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆಯ ಆಧಾರದ ಮೇಲೆ ಭಾರತ-ಚೀನಾ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯಲು ಬದ್ಧರಾಗಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಚೀನಾದ ಟಿಯಾಂಜಿನ್ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಕಳೆದ ವರ್ಷ ರಷ್ಯಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, "ಕಜಾನ್ನಲ್ಲಿ ನಾವು ಬಹಳ ಫಲಪ್ರದ ಚರ್ಚೆಗಳನ್ನು ನಡೆಸಿದ್ದೇವೆ, ಇದು ನಮ್ಮ ಸಂಬಂಧಗಳಿಗೆ ಸಕಾರಾತ್ಮಕ ನಿರ್ದೇಶನವನ್ನು ನೀಡಿತು. ಗಡಿಯಲ್ಲಿ ಸೇನೆಯನ್ನು ಪರಸ್ಪರ ಹಿಂದಕ್ಕೆ ಪಡೆದ ನಂತರ ಶಾಂತಿ ಮತ್ತು ಸ್ಥಿರತೆಯ ವಾತಾವರಣ ನಿರ್ಮಾಣವಾಗಿದೆ" ಎಂದು ಹೇಳಿದರು.
"ಭಾರತ ಮತ್ತು ಚೀನಾದಲ್ಲಿರುವ 2.8 ಬಿಲಿಯನ್ ಜನರ ಯೋಗಕ್ಷೇಮವು ನಮ್ಮ ದೇಶಗಳ ನಡುವಿನ ಸಹಕಾರವನ್ನು ಅವಲಂಬಿಸಿದೆ. ಪರಸ್ಪರ ಗೌರವ, ವಿಶ್ವಾಸ ಮತ್ತು ಸೂಕ್ಷ್ಮತೆಯ ಆಧಾರದ ಮೇಲೆ ನಮ್ಮ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯಲು ಭಾರತ ಬದ್ಧವಾಗಿದೆ" ಎಂದರು.
ಈ ವೇಳೆ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು, "ಜಗತ್ತು ಪರಿವರ್ತನೆಯತ್ತ ಸಾಗುತ್ತಿದೆ. ಚೀನಾ ಮತ್ತು ಭಾರತ ಎರಡು ಅತ್ಯಂತ ನಾಗರಿಕ ರಾಷ್ಟ್ರಗಳಾಗಿವೆ. ನಾವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಾಗಿದ್ದೇವೆ ಮತ್ತು ಜಾಗತಿಕ ದಕ್ಷಿಣದ ಭಾಗವಾಗಿದ್ದೇವೆ. ಸ್ನೇಹಿತರಾಗಿ ಒಳ್ಳೆಯ ನೆರೆಹೊರೆಯವರಾಗಿ ಇರಲು ಡ್ರ್ಯಾಗನ್ ಮತ್ತು ಆನೆ ಒಟ್ಟಿಗೆ ಬರುವುದು ಅತ್ಯಗತ್ಯ" ಎಂದು ತಿಳಿಸಿದರು.