ವಾಷಿಂಗ್ಟನ್,ಅ. 19 (DaijiworldNews/TA): ಅಮೆರಿಕದ ರಾಜಕೀಯ ವಾತಾವರಣ ಮತ್ತೊಮ್ಮೆ ತೀವ್ರತೆ ಪಡೆದುಕೊಂಡಿದ್ದು, ಶನಿವಾರ (ಅಕ್ಟೋಬರ್ 18) ನಾಡಿನ ಎಲ್ಲ 50 ರಾಜ್ಯಗಳಲ್ಲಿಯೂ ಸಾವಿರಾರು ಜನರು ‘ನೋ ಕಿಂಗ್ಸ್’ ಎಂಬ ಘೋಷಣೆಯೊಂದಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದರು. ಸುಮಾರು 70 ಲಕ್ಷಕ್ಕೂ ಹೆಚ್ಚು ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಪ್ರತಿಭಟನೆಯು ಟ್ರಂಪ್ ಅವರ ಆಡಳಿತ ಶೈಲಿಯ ವಿರುದ್ಧ ಉದ್ಭವಿಸಿದ್ದು, ಅವರು ಪ್ರಜಾಪ್ರಭುತ್ವವನ್ನು ಕಡೆಗಣಿಸಿ ರಾಜಶಾಹಿ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪದಿಂದ ಪ್ರೇರಿತವಾಗಿದೆ. ಟ್ರಂಪ್ ಅವರು ಆಮದು ಸುಂಕ ಹೆಚ್ಚಿಸುವುದು, ವಲಸಿಗರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದು ಮತ್ತು ತೀವ್ರ ಭದ್ರತಾ ನೀತಿಗಳನ್ನು ರೂಪಿಸುವ ಮೂಲಕ ‘ರಾಜನಂತೆ’ ವರ್ತಿಸುತ್ತಿದ್ದಾರೆ ಎಂಬುದು ಸಾರ್ವಜನಿಕ ಆಕ್ರೋಶದ ಮೂಲ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, "No Kings" (ನಾವು ರಾಜರನ್ನು ಬಯಸುವುದಿಲ್ಲ) ಎಂಬ ಘೋಷಣೆಯೊಂದಿಗೆ ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್, ಬೋಸ್ಟನ್, ಫಿಲಡೆಲ್ಫಿಯಾ, ಅಟ್ಲಾಂಟಾ, ಡೆನ್ವರ್, ಚಿಕಾಗೋ, ಸಿಯಾಟಲ್ ಸೇರಿದಂತೆ ಅನೇಕ ಮಹಾನಗರಗಳಲ್ಲಿ ಜನರು ರಸ್ತೆಗಿಳಿದು ಪ್ರತಿಭಟಿಸಿದರು.
ಈ ಪ್ರತಿಭಟನೆಯ ವಿರುದ್ಧ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, ತಮ್ಮ ಸ್ವಂತ ಸೋಷಿಯಲ್ ಮೀಡಿಯಾ ವೇದಿಕೆಯಾದ ಟ್ರೂತ್ ಸೋಷಿಯಲ್ ನಲ್ಲಿ ಕೆಲವೊಂದು ಎಐ ಮೂಲಕ ಸೃಷ್ಟಿಸಿದ ವಿಡಿಯೋಗಳನ್ನು ಪೋಸ್ಟ್ ಮಾಡಿ, ಪ್ರತಿಭಟನಾಕಾರರನ್ನು ತೀವ್ರವಾಗಿ ತಿರಸ್ಕರಿಸಿದ್ದಾರೆ. ಈ ಎಐ ವಿಡಿಯೋಗಳಲ್ಲಿ ಟ್ರಂಪ್ ರಾಜನಂತೆ ಕಿರೀಟ ಧರಿಸಿ, ಫೈಟರ್ ಜೆಟ್ಯೊಂದರಲ್ಲಿ ಕುಳಿತಿದ್ದು, ಮೇಲಿನಿಂದ ಕಕ್ಕಸ್ಸು ಎರಚುವ ದೃಶ್ಯವಿದೆ. ಇದು ನೇರವಾಗಿ ಪ್ರತಿಭಟನೆಯಲ್ಲಿ ಪ್ರಮುಖ ಮುಖವನ್ನಾಳುತ್ತಿರುವ ಹ್ಯಾರಿ ಸಿಸ್ಸನ್ರ ಮೇಲೆ ಬೀಳುವಂತೆ ತೋರಿಸಲಾಗಿದೆ. ಈ ದೃಶ್ಯಗಳನ್ನು ಟ್ರಂಪ್ ಹಾಸ್ಯ ರೂಪದಲ್ಲಿ ಉಪಯೋಗಿಸಿದ್ದಾರೆ.
ಮತ್ತೊಂದು ಎಐ ದೃಶ್ಯದಲ್ಲಿ ಟ್ರಂಪ್ ಕಿರೀಟ ತೊಟ್ಟು ರಾಜಸಿಂಹಾಸನದ ಮೇಲೆ ಕುಳಿತಿರುವ ದೃಶ್ಯವಿದ್ದು, ವಿಪಕ್ಷ ನಾಯಕಿ ನ್ಯಾನ್ಸಿ ಪೆಲೋಸಿ ಹಾಗೂ ಇತರ ರಾಜಕೀಯ ಮುಖಂಡರು ಅವರ ಮುಂದೆ ಮಂಡಿಯೂರುತ್ತಿರುವ ಭಾವಚಿತ್ರವನ್ನು ಒಳಗೊಂಡಿದೆ. ಈ ದೃಶ್ಯಗಳು ಜನರಲ್ಲಿ ನಗೆ ಹುಟ್ಟಿಸುತ್ತಿದ್ದರೂ, ಕೆಲವರು ಇದನ್ನು ರಾಜಕೀಯ ನಿರ್ಲಜ್ಜತೆ ಎಂಬ ಟೀಕೆಯಲ್ಲೂ ಪರಿಗಣಿಸುತ್ತಿದ್ದಾರೆ.
ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಟ್ರಂಪ್, "ಅವರು ನನ್ನನ್ನು ರಾಜ ಎಂದು ಕರೆಯುತ್ತಾರೆ. ಆದರೆ ನಾನು ರಾಜ ಅಲ್ಲ," ಎಂದು ಸ್ಪಷ್ಟಪಡಿಸಿದ್ದು, ಈ ಪೂರ್ಣ ಪ್ರತಿಭಟನೆಗಳ ಹಿಂದಿರುವುದು ಡೆಮಾಕ್ರಾಟ್ ಪಕ್ಷದ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ಜೊತೆಗೆ, "ಈ ಡೆಮಾಕ್ರಾಟ್ ನಾಯಕರನ್ನು ನಾವು ಸರ್ಕಾರದಿಂದ ಶಾಶ್ವತವಾಗಿ ದೂರವಿಟ್ಟರೆ, ಅವರ ಯೋಜನೆಗಳನ್ನು ಕಡಿದುಹಾಕುವುದು ಸುಲಭವಾಗುತ್ತದೆ" ಎಂದು ವ್ಯಂಗ್ಯ ಮಾಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳು ಟ್ರಂಪ್ ರಾಜಕೀಯ ಶೈಲಿ ಹಾಗೂ ಪ್ರಜಾಪ್ರಭುತ್ವದ ಸ್ಥಿತಿಗತಿಗಳನ್ನು ಮತ್ತೆ ಚರ್ಚೆಯ ಕೇಂದ್ರವನ್ನಾಗಿಸಿದ್ದರೆ, ಎಐ ತಂತ್ರಜ್ಞಾನವನ್ನು ಉಪಯೋಗಿಸಿ ರಾಜಕೀಯ ಪ್ರತಿಕ್ರಿಯೆ ನೀಡುವ ಪ್ರಕ್ರಿಯೆಯು ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.