ವಾಷಿಂಗ್ಟನ್, ಜು10(Daijiworld News/SS): ಅಮೆರಿಕದ ಉತ್ನನ್ನಗಳ ಮೇಲೆ ಹೆಚ್ಚು ಆಮದು ಸುಂಕ ವಿಧಿಸುವ ಮೂಲಕ ಭಾರತ ಅಮೆರಿಕದಿಂದ ಹೆಚ್ಚು ಲಾಭವನ್ನು ಪಡೆದುಕೊಳ್ಳುತ್ತಿದೆ ಎಂದು ಮತ್ತೊಮ್ಮೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ಭಾರತ, ಅಮೆರಿಕದ ಉತ್ಪನ್ನಗಳಿಗೆ ಅಧಿಕ ಆಮದು ಸುಂಕ ವಿಧಿಸುತ್ತಿದ್ದು, ಇನ್ನು ಮುಂದೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಉಭಯ ದೇಶಗಳು ವ್ಯಾಪಾರ ಭಿನ್ನಾಭಿಪ್ರಾಯಗಳ ಕುರಿತು ಮತ್ತೆ ಮಾತುಕತೆ ನಡೆಸಲಿವೆ. ಭಾರತ ಅಮೆರಿಕದ ಉತ್ಪನ್ನಗಳಿಗೆ ಅಧಿಕ ಸುಂಕ ವಿಧಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಒಸಾಕಾದಲ್ಲಿ ನಡೆದ ಜಿ 20 ಶೃಂಗಸಭೆಯ ಮುನ್ನಾ ದಿನದಂದು ಮೋದಿಯವರನ್ನು ಭೇಟಿಯಾಗುವ ಮುನ್ನ ಟ್ರಂಪ್ ಅಮೆರಿಕಾದ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ವಿಚಾರಕ್ಕೆ ತಮ್ಮ ಟ್ವೀಟ್ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ಇದನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದರು. ಹಾರ್ಲೆ-ಡೇವಿಡ್ಸನ್ ದ್ವಿಚಕ್ರವಾಹನಗಳೂ ಸೇರಿದಂತೆ ಅಮೆರಿಕ ತಯಾರಿಸುವ ವಸ್ತುಗಳ ಮೇಲೆ ಶೇ.100ರಷ್ಟು ತೆರಿಗೆ ವಿಧಿಸುವ ಮೂಲಕ ಭಾರತ ಅತಿ ಹೆಚ್ಚು ಸುಂಕ ವಿಧಿಸುತ್ತಿದೆ. ಇದು ಸರಿಯಾದ ಕ್ರಮವಲ್ಲ. ಅಮೆರಿಕದ ವಸ್ತುಗಳಿಗೆ ಅತ್ಯಧಿಕ ಸುಂಕ ವಿಧಿಸುವ ದೇಶಗಳಲ್ಲಿ ಭಾರತವೂ ಒಂದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರಿದ್ದರು. ಇದೀಗ ಮತ್ತೆ ಭಾರತದ ವಿರುದ್ಧ ಗುಡುಗಿದ್ದಾರೆ.