ವಾಷಿಂಗ್ಟನ್, ಡಿ. 14 (DaijiworldNews/TA): ಅಮೆರಿಕದ ರೋಡ್ ಐಲೆಂಡ್ ರಾಜ್ಯದ ಪ್ರಾವಿಡೆನ್ಸ್ ನಗರದಲ್ಲಿರುವ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಅಂತಿಮ ಪರೀಕ್ಷೆಗಳ ಸಮಯದಲ್ಲಿ ಭೀಕರ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಹಾಗೂ ಎಂಟು ಮಂದಿ ಗಾಯಗೊಂಡಿದ್ದಾರೆ.

ಗುಂಡಿನ ದಾಳಿ ವಿಶ್ವವಿದ್ಯಾಲಯದ ಬರಸ್-ಹೋಲಿ ಕಟ್ಟಡದ ಬಳಿ ಸಂಭವಿಸಿದೆ. ಏಳು ಅಂತಸ್ತುಗಳನ್ನು ಹೊಂದಿರುವ ಈ ಕಟ್ಟಡದಲ್ಲಿ 100 ಕ್ಕೂ ಹೆಚ್ಚು ಪ್ರಯೋಗಾಲಯಗಳು, ಅನೇಕ ತರಗತಿ ಕೊಠಡಿಗಳು ಮತ್ತು ಆಡಳಿತ ಕಚೇರಿಗಳು ಇರುವುದಾಗಿ ತಿಳಿದುಬಂದಿದೆ.
ಘಟನೆ ನಡೆದ ಕೂಡಲೇ ಭದ್ರತಾ ಕಾರಣಗಳಿಂದಾಗಿ ಸಂಪೂರ್ಣ ಕ್ಯಾಂಪಸ್ನಲ್ಲಿ ಎಚ್ಚರಿಕೆ ಘೋಷಿಸಲಾಯಿತು. ಅಧಿಕಾರಿಗಳು ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುವವರೆಗೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಬಾಗಿಲುಗಳನ್ನು ಲಾಕ್ ಮಾಡಿಕೊಂಡು ಒಳಗೇ ಇರಲು, ಮೊಬೈಲ್ ಫೋನ್ಗಳನ್ನು ಸೈಲೆಂಟ್ ಮೋಡ್ನಲ್ಲಿ ಇಡಲು ಹಾಗೂ ಸುರಕ್ಷಿತವಾಗಿ ಅಡಗಿಕೊಳ್ಳಲು ಸೂಚನೆ ನೀಡಲಾಯಿತು.
ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಓರ್ವ ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಕುರಿತು ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಇನ್ನಷ್ಟೇ ಪ್ರಕಟಿಸಬೇಕಿದೆ. ಈ ಘಟನೆ ಅಮೆರಿಕದ ವಿಶ್ವವಿದ್ಯಾಲಯಗಳ ಭದ್ರತೆ ಕುರಿತ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.