ಕೇಪ್ ಟೌನ್, ಡಿ. 14 (DaijiworldNews/AA): ನಿರ್ಮಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ಹಿಂದೂ ದೇವಾಲಯ ಕುಸಿದು ನಾಲ್ವರು ಮೃತಪಟ್ಟ ಘಟನೆ ದಕ್ಷಿಣ ಆಫ್ರಿಕಾದ ಕ್ವಾಜುಲು-ನಟಾಲ್ ಪ್ರಾಂತ್ಯದಲ್ಲಿ ನಡೆದಿದೆ. ಮೃತಪಟ್ಟ ನಾಲ್ವರ ಪೈಕಿ 52 ವರ್ಷದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸೇರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಥೆಕ್ವಿನಿಯ ಉತ್ತರದಲ್ಲಿರುವ ರೆಡ್ಕ್ಲಿಫ್ನಲ್ಲಿರುವ ಕಡಿದಾದ ಬೆಟ್ಟದ ಮೇಲಿರುವ ನ್ಯೂ ಅಹೋಬಿಲಂ ಟೆಂಪಲ್ ಆಫ್ ಪ್ರೊಟೆಕ್ಷನ್ ದೇವಾಲಯದ ಕಟ್ಟಡದ ಕಾಮಗಾರಿ ನಡೆಯುತ್ತಿದ್ದಾಗ ದೇವಾಲಯದ ಒಂದು ಭಾಗ ಕುಸಿದು ಬಿದ್ದಿದೆ. ಸ್ಥಳದಲ್ಲಿದ್ದ ಕಾರ್ಮಿಕರು ಭಾರೀ ಪ್ರಮಾಣದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವಶೇಷಗಳ ಅಡಿ ಎಷ್ಟು ಜನ ಸಿಲುಕಿದ್ದಾರೆ ಎಂಬ ನಿಖರ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಶುಕ್ರವಾರ (ಡಿ.12) ಇಬ್ಬರು ಕಟ್ಟಡ ಕಾರ್ಮಿಕರು ಮತ್ತು ಓರ್ವ ಭಕ್ತ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿತ್ತು. ರಕ್ಷಣಾ ತಂಡಗಳು ಶನಿವಾರ (ಡಿ.13) ಮತ್ತೊಬ್ಬರ ಶವವನ್ನು ಹೊರತೆಗೆದಿದ್ದು ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಮೃತ ನಾಲ್ವರ ಪೈಕಿ ಒಬ್ಬರನ್ನು ದೇವಾಲಯ ಟ್ರಸ್ಟ್ನ ಕಾರ್ಯನಿರ್ವಾಹಕ ಸದಸ್ಯ ಮತ್ತು ನಿರ್ಮಾಣ ಯೋಜನೆಯ ವ್ಯವಸ್ಥಾಪಕ ವಿಕಿ ಜೈರಾಜ್ ಪಾಂಡೆ ಎಂದು ತಿಳಿದುಬಂದಿದೆ.
ಪಾಂಡೆ ಸುಮಾರು ಎರಡು ವರ್ಷಗಳ ಹಿಂದೆ ದೇವಾಲಯದ ಅಭಿವೃದ್ಧಿಯಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ದೇವಾಲಯಕ್ಕೆ ಸಂಬಂಧಿಸಿದ ದತ್ತಿ ಸಂಸ್ಥೆಯಾದ ಫುಡ್ ಫಾರ್ ಲವ್ನ ನಿರ್ದೇಶಕ ಸನ್ವೀರ್ ಮಹಾರಾಜ್ ಕೂಡ ಪಾಂಡೆಯವರು ಸಾವನ್ನಪ್ಪಿರುವುದಾಗಿ ಖಚಿತಪಡಿಸಿದ್ದಾರೆ.
ಪ್ರತಿಕೂಲ ಹವಾಮಾನದಿಂದಾಗಿ ಶನಿವಾರ ಮಧ್ಯಾಹ್ನ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಈ ಹಂತದಲ್ಲಿ, ಅವಶೇಷಗಳ ಅಡಿಯಲ್ಲಿ ಹೆಚ್ಚುವರಿ ವ್ಯಕ್ತಿಗಳು ಸಿಲುಕಿಕೊಂಡಿದ್ದಾರೆಯೇ ಎಂಬ ಬಗ್ಗೆ ದೃಢಪಡಿಸಲು ಸಾಧ್ಯವಿಲ್ಲವೆಂದು ಅಧಿಕಾರಿಗಳು ಹೇಳಿದ್ದಾರೆ.