ರಿಯಾದ್, ಡಿ. 18 (DaijiworldNews/AA): ಸೌದಿ ಅರೇಬಿಯಾದಿಂದ 56,000 ಪಾಕಿಸ್ತಾನಿ ಭಿಕ್ಷುಕರನ್ನು ಗಡಿಪಾರು ಮಾಡಲಾಗಿದ್ದು, ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಕೂಡ ನೀಡಲಾಗಿದೆ.

ವಿದೇಶಗಳಲ್ಲಿ ಸಂಘಟಿತ ಭಿಕ್ಷಾಟನೆ ಮತ್ತು ಅಪರಾಧ ಚಟುವಟಿಕೆಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಹಿನ್ನೆಲೆ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಪಾಕಿಸ್ತಾನಿ ಪ್ರಜೆಗಳ ಮೇಲೆ ತಪಾಸಣೆ ನಡೆಸುತ್ತಿವೆ. ಈ ಪ್ರವೃತ್ತಿಯು ದೇಶದ ಅಂತರರಾಷ್ಟ್ರೀಯ ಪ್ರತಿಷ್ಠೆಗೆ ಹಾನಿ ಮಾಡುತ್ತಿದೆ ಎಂದು ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ.
ಸೌದಿ ಅರೇಬಿಯಾ ಮಾತ್ರ ಭಿಕ್ಷಾಟನೆ ಆರೋಪದ ಮೇಲೆ 56,000 ಪಾಕಿಸ್ತಾನಿಗಳನ್ನು ಗಡಿಪಾರು ಮಾಡಿದೆ. ಆದರೆ ಯುಎಇ ಹೆಚ್ಚಿನ ಪಾಕಿಸ್ತಾನಿ ನಾಗರಿಕರ ಮೇಲೆ ವೀಸಾ ನಿರ್ಬಂಧಗಳನ್ನು ವಿಧಿಸಿದೆ. ಕೆಲವರು ದೇಶಕ್ಕೆ ಬಂದ ನಂತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ಆತಂಕ ವ್ಯಕ್ತವಾಗಿದೆ.
ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್ಐಎ) ದತ್ತಾಂಶವು ಸಮಸ್ಯೆಯ ಪ್ರಮಾಣವನ್ನು ತೋರಿಸಿದೆ. 2025 ರಲ್ಲಿ, ಸಂಘಟಿತ ಭಿಕ್ಷಾಟನೆ ಸಿಂಡಿಕೇಟ್ಗಳನ್ನು ನಾಶಮಾಡಲು ಮತ್ತು ಅಕ್ರಮ ವಲಸೆಯನ್ನು ತಡೆಯುವ ಪ್ರಯತ್ನದಲ್ಲಿ ಅಧಿಕಾರಿಗಳು ವಿಮಾನ ನಿಲ್ದಾಣಗಳಲ್ಲಿ 66,154 ಪ್ರಯಾಣಿಕರನ್ನು ತಡೆದಿರುವುದಾಗಿ ತಿಳಿದುಬಂದಿದೆ.
"ಈ ಜಾಲಗಳು ಪಾಕಿಸ್ತಾನದ ಪ್ರತಿಷ್ಠೆಗೆ ಹಾನಿಯನ್ನುಂಟುಮಾಡುತ್ತಿವೆ. ಈ ಪ್ರವೃತ್ತಿ ಕೇವಲ ಕೊಲ್ಲಿಗೆ ಸೀಮಿತವಾಗಿಲ್ಲ. ಆಫ್ರಿಕಾ ಮತ್ತು ಯುರೋಪ್ಗೆ ಪ್ರಯಾಣ ಬೆಳೆಸುವುದರ ಜೊತೆಗೆ ಕಾಂಬೋಡಿಯಾ ಮತ್ತು ಥೈಲ್ಯಾಂಡ್ನಂತಹ ತಾಣಗಳಿಗೆ ಪ್ರವಾಸಿ ವೀಸಾಗಳ ದುರುಪಯೋಗವನ್ನು ಒಳಗೊಂಡಂತೆ ಇದೇ ರೀತಿಯ ಪ್ರಕರಣಗಳು ಪತ್ತೆಯಾಗಿವೆ" ಎಂದು ಎಫ್ಐಎ ಮಹಾನಿರ್ದೇಶಕ ರಿಫತ್ ಮುಖ್ತಾರ್ ಹೇಳಿದ್ದಾರೆ.