ಮಸ್ಕತ್, ಡಿ. 19 (DaijiworldNews/TA): ಭಾರತ ಮತ್ತು ಓಮನ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ನೀಡಿದ ವಿಶಿಷ್ಟ ಕೊಡುಗೆಗಳನ್ನು ಗುರುತಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಓಮನ್ನ ಅತ್ಯುನ್ನತ ನಾಗರಿಕ ಗೌರವವಾದ ‘ಆರ್ಡರ್ ಆಫ್ ಓಮನ್’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಮಸ್ಕತ್ನಲ್ಲಿ ನಡೆದ ಸಮಾರಂಭದಲ್ಲಿ ಓಮನ್ನ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಗೌರವವನ್ನು ನೀಡಿ ಸನ್ಮಾನಿಸಿದರು. ಭಾರತ-ಓಮನ್ ನಡುವಿನ ರಾಜತಾಂತ್ರಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಪ್ರಧಾನಿ ಮೋದಿಯವರ ಪಾತ್ರವನ್ನು ಗೌರವಿಸಿ ಈ ಪ್ರಶಸ್ತಿ ನೀಡಲಾಗಿದೆ.
ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಈ ಹಿಂದೆ ಬ್ರಿಟನ್ನ ರಾಣಿ ಎಲಿಜಬೆತ್ II, ನೆದರ್ಲ್ಯಾಂಡ್ಸ್ನ ರಾಣಿ ಮ್ಯಾಕ್ಸಿಮಾ, ಜಪಾನ್ನ ಚಕ್ರವರ್ತಿ ಅಕಿಹಿಟೊ, ದಕ್ಷಿಣ ಆಫ್ರಿಕಾದ ಮಾಜಿ ರಾಷ್ಟ್ರಪತಿ ನೆಲ್ಸನ್ ಮಂಡೇಲಾ ಮತ್ತು ಜೋರ್ಡಾನ್ನ ರಾಜ ಅಬ್ದುಲ್ಲಾ ಸೇರಿದಂತೆ ವಿಶ್ವದ ಹಲವು ಗಣ್ಯರಿಗೆ ಪ್ರದಾನ ಮಾಡಲಾಗಿದೆ. ಇದೀಗ ಆ ಗೌರವಾನ್ವಿತರ ಸಾಲಿಗೆ ಪ್ರಧಾನಿ ನರೇಂದ್ರ ಮೋದಿಯವರೂ ಸೇರ್ಪಡೆಯಾಗಿದ್ದಾರೆ.
ಇದು ಪ್ರಧಾನಿ ಮೋದಿಗೆ ಲಭಿಸಿರುವ 29ನೇ ಅಂತಾರಾಷ್ಟ್ರೀಯ ಗೌರವವಾಗಿದ್ದು, ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಭಾವ ಮತ್ತು ನಾಯಕತ್ವಕ್ಕೆ ದೊರೆತ ಮತ್ತೊಂದು ಮಹತ್ವದ ಮಾನ್ಯತೆಯಾಗಿ ಪರಿಗಣಿಸಲಾಗಿದೆ.