ಕೆರೊಲಿನಾ, ಡಿ. 19 (DaijiworldNews/TA): ಬೆಳಗ್ಗೆ ಸುಮಾರು 10 ಗಂಟೆಗೆ ಸೆಸ್ನಾ C550 ವಿಮಾನವು ಸ್ಟೇಟ್ಸ್ವಿಲ್ಲೆ ಪ್ರಾದೇಶಿಕ ವಿಮಾನ ನಿಲ್ದಾಣದಿಂದ ಫ್ಲೋರಿಡಾಕ್ಕೆ ಹೊರಟಿತ್ತು. ಟೇಕ್ ಆಫ್ ಆದ ಸ್ವಲ್ಪ ಸಮಯದ ಬಳಿಕ ತಾಂತ್ರಿಕ ತೊಂದರೆಯ ಅನುಮಾನದಿಂದ ಪೈಲಟ್ ವಿಮಾನವನ್ನು ಮರಳಿ ವಿಮಾನ ನಿಲ್ದಾಣಕ್ಕೆ ಕರೆತರುವ ಪ್ರಯತ್ನ ಮಾಡಿದ್ದಾರೆ. ಆದರೆ ನಿಯಂತ್ರಣ ತಪ್ಪಿದ ವಿಮಾನ ನೆಲಕ್ಕೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿದೆ.

ಈ ಅಪಘಾತದಲ್ಲಿ ನಿವೃತ್ತ ನಾಸ್ಕರ್ ಚಾಲಕ ಗ್ರೆಗ್ ಬಿಫಲ್ (55), ಅವರ ಪತ್ನಿ ಕ್ರಿಸ್ಟಿನಾ, ಐದು ವರ್ಷದ ಪುತ್ರ ರೈಡರ್, 14 ವರ್ಷದ ಪುತ್ರಿ ಎಮ್ಮಾ ಸೇರಿದಂತೆ ಸಾವನ್ನಪ್ಪಿದ್ದಾರೆ. ಅಲ್ಲದೆ ಡೆನ್ನಿಸ್ ಡಟ್ಟನ್, ಅವರ ಪುತ್ರ ಜ್ಯಾಕ್ ಮತ್ತು ಕ್ರೇಗ್ ವ್ಯಾಡ್ಸ್ವರ್ತ್ ಕೂಡ ವಿಮಾನದಲ್ಲಿದ್ದು, ಅವರೆಲ್ಲರೂ ದುರ್ಮರಣ ಹೊಂದಿದ್ದಾರೆ.
ಷಾರ್ಲೆಟ್ ನಗರದಿಂದ ಉತ್ತರಕ್ಕೆ ಸುಮಾರು 72 ಕಿಲೋಮೀಟರ್ ದೂರದಲ್ಲಿ ಈ ದುರಂತ ಸಂಭವಿಸಿದೆ. ಡಿಕ್ಕಿ ಹೊಡೆದ ತಕ್ಷಣವೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಉತ್ತರ ಕೆರೊಲಿನಾ ರಾಜ್ಯ ಹೆದ್ದಾರಿ ಗಸ್ತು ದಳ ಮಾಹಿತಿ ನೀಡಿದೆ. ವಿಮಾನ ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸಂಬಂಧಿಸಿದ ಅಧಿಕಾರಿಗಳು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ. ಈ ದುರ್ಘಟನೆ ಅಮೆರಿಕಾದಲ್ಲಿ ಕ್ರೀಡಾ ಲೋಕ ಹಾಗೂ ಸಾರ್ವಜನಿಕರಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.