ಢಾಕಾ, ಡಿ. 19 (DaijiworldNews/TA): ವಿಪಕ್ಷ ನಾಯಕ ಉಸ್ಮಾನ್ ಹಾದಿ ಹತ್ಯೆ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಚುನಾವಣಾ ಪ್ರಚಾರದ ವೇಳೆ ಅವಾಮಿ ಲೀಗ್ ಪಕ್ಷದ ನಾಯಕ ಉಸ್ಮಾನ್ ಹಾದಿ ಮೇಲೆ ಗುಂಡಿನ ದಾಳಿ ನಡೆದಿದ್ದು, ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ.

ಉಸ್ಮಾನ್ ಹಾದಿ ಅವರ ಸಾವಿನಿಂದ ಆಕ್ರೋಶಗೊಂಡ ಬೆಂಬಲಿಗರು ಹಾಗೂ ಪ್ರತಿಭಟನಾಕಾರರು ನಿನ್ನೆ ರಾತ್ರಿ ದೇಶದ ಹಲವೆಡೆ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದಾರೆ. ರಾಜಧಾನಿ ಢಾಕಾದಲ್ಲಿರುವ ಖ್ಯಾತ ಪ್ರೋಥೋಮ್ ಅಲೋ ಪತ್ರಿಕೆಯ ಕಟ್ಟಡದ ಮೇಲೆ ದಾಳಿ ನಡೆದಿದ್ದು, ವಿವಿಧ ಪ್ರದೇಶಗಳಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಈ ಘಟನೆ ಬಳಿಕ ಮೊಹಮ್ಮದ್ ಯೂನಸ್ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂಬ ಆರೋಪಗಳು ಕೇಳಿಬಂದಿವೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಭದ್ರತಾ ಪಡೆಗಳನ್ನು ಹಲವೆಡೆ ನಿಯೋಜಿಸಲಾಗಿದೆ.
ಗಮನಾರ್ಹವಾಗಿ, ಕಳೆದ ವರ್ಷ ಪ್ರಧಾನಿ ಶೇಖ್ ಹಸೀನಾರನ್ನು ಅಧಿಕಾರದಿಂದ ಕೆಳಗಿಳಿಸಲು ಬಾಂಗ್ಲಾದೇಶದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಆ ಬೆಳವಣಿಗೆಯ ನಂತರ ಶೇಖ್ ಹಸೀನಾ ದೇಶ ತೊರೆದು ಭಾರತಕ್ಕೆ ಆಗಮಿಸಿದ್ದರು. ಬಳಿಕ ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿತ್ತು. ಇದೀಗ ಉಸ್ಮಾನ್ ಹಾದಿ ಹತ್ಯೆ ದೇಶವನ್ನು ಮತ್ತೊಮ್ಮೆ ಅಸ್ಥಿರತೆಯತ್ತ ಕೊಂಡೊಯ್ಯುತ್ತಿರುವಂತಾಗಿದೆ.