ಬೀಜಿಂಗ್, ಡಿ. 20 (DaijiworldNews/TA): ಹಿಮಾಲಯ ಪರ್ವತ ಪ್ರದೇಶದಲ್ಲಿ ವಿಶ್ವದ ಅತಿದೊಡ್ಡ ಜಲವಿದ್ಯುತ್ ಅಣೆಕಟ್ಟು ನಿರ್ಮಿಸಲು ಚೀನಾ ಮುಂದಾಗಿದೆ. ಚೀನಾದಲ್ಲಿ ಯಾರ್ಲುಂಗ್ ತ್ಯಾಂಗ್ಪೋ ಎಂದು ಕರೆಯಲಾಗುವ ಬ್ರಹ್ಮಪುತ್ರಾ ನದಿಗೆ ಮೆಗಾ ಡ್ಯಾಂ ಕಟ್ಟುವ ಯೋಜನೆಯನ್ನು ಬೀಜಿಂಗ್ ರೂಪಿಸಿದೆ. ಸುಮಾರು 60 ಗಿಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಈ ಅಣೆಕಟ್ಟು, ಕಾರ್ಯಾರಂಭವಾದರೆ ವಿಶ್ವದ ಅತ್ಯಂತ ಶಕ್ತಿಶಾಲಿ ಡ್ಯಾಂ ಆಗಲಿದೆ.

ಆದರೆ ಈ ಯೋಜನೆ ಭಾರತಕ್ಕೆ “ವಾಟರ್ ಬಾಂಬ್” ಆಗುವ ಅಪಾಯವಿದೆ ಎಂದು ಅರುಣಾಚಲ ಪ್ರದೇಶದ ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ಈ ಮಹತ್ವಾಕಾಂಕ್ಷಿ ಯೋಜನೆಯಿಂದ ಭಾರತ ಮತ್ತು ಬಾಂಗ್ಲಾದೇಶದಲ್ಲಿ ನೀರಿನ ಲಭ್ಯತೆ, ಕೃಷಿ ವ್ಯವಸ್ಥೆ ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕ ಹೆಚ್ಚಾಗಿದೆ.
ಬ್ರಹ್ಮಪುತ್ರಾ ನದಿ ಟಿಬೆಟ್ನಿಂದ ಹರಿದು ಭಾರತವನ್ನು ಪ್ರವೇಶಿಸಿ ಅಸ್ಸಾಂ ಮೂಲಕ ಬಾಂಗ್ಲಾದೇಶಕ್ಕೆ ಸೇರುತ್ತದೆ. ಈ ನದಿಯ ನೀರಿನ ಮೇಲೆ ಕೃಷಿ, ಮೀನುಗಾರಿಕೆ ಮತ್ತು ದೈನಂದಿನ ಅಗತ್ಯಗಳಿಗಾಗಿ ಲಕ್ಷಾಂತರ ಜನರು ಅವಲಂಬಿತರಾಗಿದ್ದಾರೆ. ಡ್ಯಾಂ ನಿರ್ಮಾಣದಿಂದಾಗಿ ಜಲಾನಯನ ಪ್ರದೇಶದಲ್ಲಿರುವ ಜನರನ್ನು ಬಲವಂತವಾಗಿ ಸ್ಥಳಾಂತರಿಸುವ ಪರಿಸ್ಥಿತಿ ನಿರ್ಮಾಣವಾಗುವ ಭೀತಿಯೂ ವ್ಯಕ್ತವಾಗಿದೆ.
ಅತಿದೊಡ್ಡ ಪ್ರಮಾಣದ ಅಣೆಕಟ್ಟಿನಲ್ಲಿ ನೀರನ್ನು ತಡೆಹಿಡಿದರೆ, ಅರುಣಾಚಲ ಪ್ರದೇಶದ ವಿಶಾಲ ಭಾಗಗಳು ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಚೀನಾದ ನೀರಿನ ನಿರ್ವಹಣಾ ನೀತಿಗಳ ಬಗ್ಗೆ ನಂಬಿಕೆ ಕೊರತೆ ಇರುವ ಹಿನ್ನೆಲೆಯಲ್ಲಿ, ಈ ಯೋಜನೆ ಭಾರತಕ್ಕೆ ಭದ್ರತಾ ಹಾಗೂ ಪರಿಸರದ ದೃಷ್ಟಿಯಿಂದ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.