ಸಿರಿಯಾ, ಡಿ. 20 (DaijiworldNews/TA): ಅಮೆರಿಕವು ಮಧ್ಯರಾತ್ರಿ ಸಿರಿಯಾದ 70 ಕ್ಕೂ ಹೆಚ್ಚು ಐಸಿಸ್ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಅಮೆರಿಕದ ಅಧಿಕಾರಿಗಳ ಪ್ರಕಾರ, ಈ ಕ್ರಮವು ಕಳೆದ ವಾರ ಮಧ್ಯ ಸಿರಿಯಾದ ಪಾಲ್ಮಿರಾ ಪ್ರದೇಶದಲ್ಲಿ ಅಮೆರಿಕ ಮತ್ತು ಮಿತ್ರ ಪಡೆಗಳ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಕೈಗೊಳ್ಳಲಾಗಿದೆ.

ಡಿಸೆಂಬರ್ 13 ರಂದು ನಡೆದ ದಾಳಿಯಲ್ಲಿ ಎರಡು ಅಮೆರಿಕ ಸೈನಿಕರು ಮತ್ತು ಸ್ಥಳೀಯ ಭಾಷಾಂತರಕಾರ ಮೃತಪಟ್ಟಿದ್ದು, ಕೆಲವು ಸೈನಿಕರು ಗಾಯಗೊಂಡಿದ್ದರು. ದಾಳಿಕೋರರು ಸಿರಿಯನ್ ಭದ್ರತಾ ಪಡೆಗಳಿಗೆ ಹೊಸದಾಗಿ ಸೇರ್ಪಡೆಯಾಗಿದ್ದು, ಐಸಿಸ್ನೊಂದಿಗೆ ಸಂಬಂಧ ಹೊಂದಿದ್ದರೆಂಬ ಶಂಕೆಯಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕ್ರಮದ ಕುರಿತು ಹೇಳಿದ್ದು, “ಸೈನಿಕರ ಮೇಲಿನ ಕ್ರೂರ ಹತ್ಯೆಗೆ ಪ್ರತೀಕಾರವಾಗಿ ಅಮೆರಿಕದ ಮಿಲಿಟರಿ ಕ್ರಮ ಕೈಗೊಳ್ಳುತ್ತಿದೆ. ಹುತಾತ್ಮರಾದ ಸೈನಿಕರ ಗೌರವಕ್ಕಾಗಿ ದಾಳಿ ನೆರವೇರಿಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಯುಎಸ್ ಮಿಲಿಟರಿ ಅಧಿಕಾರಿಗಳ ಪ್ರಕಾರ, ಮಧ್ಯ ಸಿರಿಯಾದ ಈ ದಾಳಿ ತೀವ್ರವಾದ ಮತ್ತು ನೇರ ಗುರಿಯಾಗಿರುವ ಶಸ್ತ್ರಾಸ್ತ್ರಗಳನ್ನು ನಾಶ ಮಾಡುವ ರೀತಿಯಲ್ಲಿ ನಡೆಸಲಾಗಿದೆ. ಅಮೆರಿಕ ಶತ್ರುಗಳನ್ನು “ಬೇಟೆಯಾಡಿ ನಿರ್ಮೂಲನೆ ಮಾಡುವ” ತತ್ತ್ವವನ್ನು ಮುಂದುವರಿಸುತ್ತಿರುವುದಾಗಿ ಹೇಳಿದ್ದಾರೆ. ಈ ದಾಳಿ ಹೊಸ ಯುದ್ಧದ ಪ್ರಾರಂಭವಲ್ಲ, ಬದಲಾಗಿ ಅಮೆರಿಕ ಸೈನಿಕರ ಮೇಲಿನ ದಾಳಿಗೆ ಸ್ಪಷ್ಟ ಪ್ರತೀಕಾರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಿರಿಯನ್ ಸರ್ಕಾರವೂ ಈ ಅಭಿಯಾನವನ್ನು ಬೆಂಬಲಿಸುತ್ತಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.