ಇಸ್ಲಾಮಾಬಾದ್, ಡಿ. 20 (DaijiworldNews/AA): ತೋಷಖಾನಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪತ್ನಿ ಬುಶ್ರಾ ಬೀಬಿಗೆ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಪಾಕ್ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಇಮ್ರಾನ್ ಖಾನ್ ಮತ್ತು ಬುಶ್ರಾ ಅವರಿಗೆ ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 409 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಅಡಿಯಲ್ಲಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
2023ರಲ್ಲಿ ತೋಷಖಾನಾ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ ನ್ಯಾಯಾಲಯವು 14 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅದಕ್ಕೂ ಮುನ್ನ ಸೋರಿಕೆಯಾದ ದಾಖಲೆಗೆ ಸಂಬಂಧಿಸಿದ ವಿವಾದಾತ್ಮಕ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಲಾಗಿತ್ತು.
ಸೈಫರ್ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರಿಗೆ ತಲಾ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.