ಬಾಂಗ್ಲಾದೇಶ, ಜು 16 (Daijiworld News/MSP): ಬಾಂಗ್ಲಾದೇಶದಲ್ಲಿ ಸುರಿಯುತ್ತಿರುವ ಬಾರಿ ಮಳೆಯ ಪರಿಣಾಮ ಉಂಟಾಗಿರುವ ಪ್ರವಾಹದ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರವಾಹದಿಂದ ನಿರಾಶ್ರಿತರ ಸಂಖ್ಯೆ ಸುಮಾರು 10 ಲಕ್ಷಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಬಾಂಗ್ಲಾದೇಶದ 15 ಜಿಲ್ಲೆಗಳು ಪ್ರವಾಹದಿಂದ ಜಲಾವೃತಗೊಂಡಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹದಿಂದಾಗಿ ಹಲವಾರು ಜನರು ತಮ್ಮ ಮನೆ ಮಠ ಕಳೆದುಕೊಂಡಿದ್ದು ಪ್ರವಾಹದ ಪರಿಣಾಮ, ಕಟ್ಟಡ, ರಸ್ತೆ, ಹಾಗೂ ಬೆಳೆಗಳು ನೀರುಪಾಲಾಗಿದೆ.
ಬ್ರಹ್ಮಪುತ್ರ, ಜಮ್ಮು, ಮತ್ತು ಪದ್ಮ ನದಿಯ ತುಂಬಿ ಹರಿಯುತ್ತಿದ್ದು, ಕುರಿಗ್ರಾಮ, ಜಾಮಲ್ಪುರ್, ಗೈಬಂಧ್, ಬೋಗುರ್, ಮತ್ತು ಸಿರಾಜ್ಗಾಜ್ ಪ್ರದೇಶಗಳು ಅಪಾಯದ ಪರಿಸ್ಥಿತಿ ಎದುರಿಸುತ್ತಿದೆ.
ಭಾರತದಲ್ಲೂ ಅಸ್ಸಾಂ ಮತ್ತು ಮೇಘಾಲಯದಲ್ಲಿ ಮಳೆ ವಿಪರೀತವಾಗಿ ಸುರಿಯುತ್ತಿದೆ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಬಾಂಗ್ಲಾದಲ್ಲಿ ಮುಂದಿನ ೪೮ ಗಂಟೆಗಳಲ್ಲಿ ಮಳೆಯ ಪ್ರಮಾಣ ಅಧಿಕವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡ ಸಂತ್ರಸ್ತರ ರಕ್ಷಣೆಗಾಗಿ ಭರದಿಂದ ಕಾರ್ಯಾಚರಣೆ ನಡೆಸುತ್ತಿದೆ.