ಲಾಹೋರ್, ಜು 17 (Daijiworld News/MSP): ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಮತ್ತು ಉಗ್ರ ಸಂಘಟನೆ ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ನನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಬುಧವಾರ ಬಂಧಿಸಿದೆ.
ಭಯೋತ್ಪಾದನೆ ನಿಗ್ರಹ ಕೋರ್ಟಿನ ಮುಂದೆ ವಿಚಾರಣೆಗೆ ಹಾಜರಾಗಲು ಲಾಹೋರ್ನಿಂದ ಗುರ್ಜನ್ವಾಲಾಗೆ ತೆರಳುತ್ತಿದ್ದಾಗ ಸಯೀದ್ನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಹಫೀಜ್ ಸಯೀದ್ ಮತ್ತು ಇತರೆ 12 ಮಂದಿಯ ಮೇಲೆ ಪಾಕಿಸ್ತಾನದ ಭಯೋತ್ಪಾದಕ ನಿಗ್ರಹ ದಳ ಪ್ರಕರಣ ದಾಖಲಿಸಿದ್ದು, ಶೀಘ್ರದಲ್ಲಿ ಬಂಧಿಸುವುದಾಗಿ ಈ ಹಿಂದೆ ಪಾಕಿಸ್ತಾನದ ಪಂಜಾಬ್ ಪೊಲೀಸರು ತಿಳಿಸಿದ್ದರು.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಹಫೀಜ್ ಸಯೀದ್ ಮೇಲೆ ಈತನಕ ಒಟ್ಟು 23 ಪ್ರಕರಣ ದಾಖಲಾಗಿತ್ತು.
ಇದೀಗ ಮಹತ್ವದ ಬೆಳವಣಿಗೆಯಲ್ಲಿ ಭಯೋತ್ಪಾದನಾ ನಿಗ್ರಹ ಇಲಾಖೆ ಪಾಕಿಸ್ತಾನದ ಗರಿಷ್ಠ ಭದ್ರತೆಯನ್ನು ಹೊಂದಿರುವ ಕೋಟ್ ಲಖ್ಪತ್ ಜೈಲಿಗೆ ಸಯೀದ್ನನ್ನು ಕಳುಹಿಸಲಾಗಿದ್ದು, ನ್ಯಾಯಾಂಗ ರಿಮಾಂಡ್ ವಿಧಿಸಲಾಗಿದೆ.