ಬೀಜಿಂಗ್ ಜು, 20 (Daijiworld News/RD): ಗ್ಯಾಸ್ ತಯಾರಿಕಾ ಘಟಕದಲ್ಲಿ ಭಾರಿ ಸ್ಫೋಟಗೊಂಡು ದುರ್ಘಟನೆ ಸಂಭವಿಸಿದ್ದು, ಈ ಘಟನೆಯಲ್ಲಿ ಕನಿಷ್ಛ 10 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಈ ಘಟನೆ ಚೀನಾದ ಯಿಮಾ ಸಿಟಿಯಲ್ಲಿ ಶುಕ್ರವಾರ ನಡೆದಿದೆ.
ಚೀನಾದ ಹೆನಾನ್ ಪ್ರಾಂತ್ಯದ ಯಿಮಾ ಸಿಟಿಯ ಹೊರವಲಯದಲ್ಲಿರುವ ಗ್ಯಾಸ್ ತಯಾರಿಕಾ ಘಟಕದಲ್ಲಿ ಈ ದುರ್ಘಟನೆ ನಡೆದಿದೆ. ವರದಿಯಾದ ಮಾಹಿತಿ ಪ್ರಕಾರ ಗ್ಯಾಸ್ ಘಟಕದಲ್ಲಿ ಭಾರಿ ಸ್ಫೋಟಗೊಂಡ ಪರಿಣಾಮ ಸ್ಥಳದಲ್ಲೇ ಕನಿಷ್ಟ 10 ಮಂದಿ ಮೃತಪಟ್ಟಿದ್ದಾರೆ. ಹಾಗೂ 19ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಾಗಿಸಿದೆ.
1997ರಲ್ಲಿ ಈ ಗ್ಯಾಸ್ ತಯಾರಿಕಾ ಘಟಕಾ ನಿರ್ಮಾಣಗೊಂಡಿದ್ದು, ಕೆಲವು ದಿನಗಳ ಹಿಂದೆ ತನ್ನ ಉತ್ಭಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಘಟಕದಲ್ಲಿ ಕೊಂಚ ಬದಲಾವಣೆ ತಂದಿತ್ತು. ಈ ರೀತಿಯ ಬದಲಾವಣೆಯಿಂದ ತಾಂತ್ರಿಕ ಲೋಪ ಉಂಟಾಗಿ ಈ ಅನಾಹುತ ನಡೆದಿದೆ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಸ್ಫೋಟದ ಪರಿಣಾಮ ಭಾರಿ ಪ್ರಮಾಣದ ಅಗ್ನಿ ಜ್ವಾಲೆಗಳು ಹೊರ ಹೊಮ್ಮಿದ್ದು, ಬೆಂಕಿ ಆರಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರ ಸಾಹಸ ಪಡುತ್ತಿದ್ದಾರೆ. ಇನ್ನು ಈ ದುರ್ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳ ವರದಿ ತಿಳಿಸಿದೆ. ಅದರೆ ಸರ್ಕಾರದಿಂದ ಘಟನೆಯ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.