ಅಥೆನ್ಸ್, ಜ. 27 (DaijiworldNews/TA): ಮಧ್ಯ ಗ್ರೀಸ್ನ ತ್ರಿಕಲಾ ನಗರ ಸಮೀಪದ ಬಿಸ್ಕೆಟ್ ಕಾರ್ಖಾನೆಯಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದ ಬೆಂಕಿ ವ್ಯಾಪಿಸಿದ್ದು, ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ ಹಾಗೂ ಒಬ್ಬರು ಇನ್ನೂ ಕಾಣೆಯಾಗಿದ್ದಾರೆ ಎಂದು ಅಗ್ನಿಶಾಮಕ ದಳ ಮಾಹಿತಿ ನೀಡಿದೆ.

ಸೋಮವಾರ ನಡೆದ ಈ ಘಟನೆಗೆ ಸಂಬಂಧಿಸಿ, ಒಟ್ಟು 53 ಅಗ್ನಿಶಾಮಕ ಸಿಬ್ಬಂದಿ, 16 ಅಗ್ನಿಶಾಮಕ ವಾಹನಗಳು ಹಾಗೂ ಹತ್ತು ಇತರೆ ಸಹಾಯಕ ವಾಹನಗಳ ಸಹಾಯದಿಂದ ಕಾರ್ಖಾನೆ ಆವರಣದಲ್ಲಿ ವ್ಯಾಪಿಸಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಫೋಟದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಕಾರ್ಖಾನೆ ಮಾಲೀಕ ಸಂಸ್ಥೆಯಾದ ವಯೋಲಾಂಟಾ ಎಸ್ಎ ತಿಳಿಸಿದೆ ಎಂದು ಅಥೆನ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಅಗ್ನಿಶಾಮಕ ಅಧಿಕಾರಿಗಳ ಪ್ರಕಾರ, ಘಟನೆಯ ವೇಳೆ ಕಾರ್ಖಾನೆಯೊಳಗೆ ಒಟ್ಟು 13 ಮಂದಿ ಇದ್ದರು. ಅವರಲ್ಲಿ ಎಂಟು ಮಂದಿ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಸಾವನ್ನಪ್ಪಿದವರ ಶವಗಳನ್ನು ಹೊರತೆಗೆಯಲಾಗಿದ್ದು, ಒಬ್ಬ ವ್ಯಕ್ತಿಯ ಶೋಧ ಕಾರ್ಯ ಮುಂದುವರಿದಿದೆ. ಘಟನಾ ಸ್ಥಳದಲ್ಲಿ ತನಿಖಾಧಿಕಾರಿಗಳು ಮತ್ತು ವಿಪತ್ತು ನಿರ್ವಹಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ.
ಗ್ರೀಸ್ನ ಅತಿದೊಡ್ಡ ಕಾರ್ಮಿಕ ಸಂಘಟನೆಯಾದ ಜಿಎಸ್ಇಇ, ಮೃತಪಟ್ಟ ನಾಲ್ವರು ಕಾರ್ಮಿಕರು ಮಹಿಳೆಯರು ಎಂದು ತಿಳಿಸಿದ್ದು, ಘಟನೆಯ ಸಂಪೂರ್ಣ ಹಾಗೂ ಪಾರದರ್ಶಕ ತನಿಖೆಗೆ ಒತ್ತಾಯಿಸಿದೆ. ಈ ಸ್ಫೋಟ ಮತ್ತು ಬೆಂಕಿ ಅವಘಡದಲ್ಲಿ ಅಗ್ನಿಶಾಮಕ ಸಿಬ್ಬಂದಿ ಸೇರಿ ಆರು ಮಂದಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಯಾರಿಗೂ ಜೀವಾಪಾಯವಿಲ್ಲ ಎಂದು ಗ್ರೀಸ್ನ ಆರೋಗ್ಯ ಸಚಿವ ಅಡೋನಿಸ್ ಜಾರ್ಜಿಯಾಡಿಸ್ ಅವರು ತಿಳಿಸಿದ್ದಾರೆ ಎನ್ನಲಾಗಿದೆ. ಘಟನೆಯ ತನಿಖೆ ಮುಂದುವರಿದಿದ್ದು, ಸ್ಫೋಟಕ್ಕೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚಲು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.