ವಾಷಿಂಗ್ಟನ್, ಜು21(Daijiworld News/SS): ಉಗ್ರ ಹಫೀಜ್ ಸಯ್ಯೀದ್'ನನ್ನು ಬಂಧಿಸಿದ ಪಾಕಿಸ್ತಾನ ಸರ್ಕಾರದ ಕ್ರಮಕ್ಕೆ ಅಮೆರಿಕ ಸರ್ಕಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಉಗ್ರನ ಬಂಧನವನ್ನು ಕಣ್ಣೊರೆಸುವ ತಂತ್ರಗಾರಿಕೆ ಎಂದು ಕಿಡಿಕಾರಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಶ್ವೇತಭವನ, ಪಾಕಿಸ್ತಾನ ಉಗ್ರರ ವಿರುದ್ಧ ಕ್ರಮ ಕೈಗೊಂಡರೆ ಅದಕ್ಕೆ ನಮ್ಮ ಬೆಂಬಲವಿದೆ. ಆದರೆ ಈ ಕಾರ್ಯ ಕೇವಲ ಕಣ್ಣೊರೆಸುವ ತಂತ್ರಗಾರಿಕೆಯಾಗಬಾರದು. ಪಾಕಿಸ್ತಾನದೊಂದಿಗೆ ಹಳಿಸಿರುವ ಬಾಂಧವ್ಯವನ್ನು ಸರಿಪಡಿಸಿಕೊಳ್ಳಲು ಅಮೆರಿಕ ಸಿದ್ಧವಿದೆ. ಆದರೆ ಪಾಕಿಸ್ತಾನ ತನ್ನ ನೆಲದಲ್ಲಿರುವ ಉಗ್ರರರನ್ನು ಮೊದಲು ಮಟ್ಟ ಹಾಕಬೇಕು. ಈ ಕುರಿತ ಪ್ರಾಮಾಣಿಕ ಪ್ರಯತ್ನವಾದರೆ ಮಾತ್ರ ಪಾಕಿಸ್ತಾನಕ್ಕೆ ಅಮೆರಿಕದ ಬೆಂಬಲ ವಿರಲಿದೆ ಎಂದು ಸ್ಪಷ್ಟಪಡಿಸಿದೆ.
ಈ ಹಿಂದೆ ಭಾರತ ಸರ್ಕಾರ ನೀಡಿದ್ದ ಡಾಸಿಯರ್ ಹೊರತಾಗಿಯೂ ಯಾವುದೇ ಕ್ರಮ ಕೈಗೊಳ್ಳದ ಪಾಕಿಸ್ತಾನ, ಇದೀಗ ಇಮ್ರಾನ್ ಖಾನ್ ಅವರ ಅಮೆರಿಕ ಪ್ರವಾಸ ಹತ್ತಿರವಾಗುತ್ತಲೇ ಉಗ್ರ ಹಫೀಜ್ ಸಯ್ಯೀದ್'ನನ್ನು ಬಂಧಿಸಿದೆ. ಆ ಮೂಲಕ ಪರೋಕ್ಷವಾಗಿ ಪರೋಕ್ಷವಾಗಿ ಅಮೆರಿಕವನ್ನು ಸಂತೈಸುವ ಕ್ರಮಕ್ಕೆ ಮುಂದಾಗಿದೆ. ಅಲ್ಲದೆ ಪಾಕಿಸ್ತಾನ ಸರ್ಕಾರಕ್ಕೆ ಅಮೆರಿಕ ನೀಡುತ್ತಿದ್ದ, ರಕ್ಷಣಾ ಪರಿಹಾರ ಧನ ಕೂಡ ಸ್ಥಗಿತವಾಗಿದ್ದು, ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದೇ ಕಾರಣಕ್ಕೆ ಪಾಕಿಸ್ತಾನ ಉಗ್ರ ಹಫೀಜ್ ಸಯ್ಯೀದ್ ಬಂಧನದ ಮೂಲಕ ವಿಶ್ವ ಸಮುದಾಯವನ್ನು ಸಂತೈಸುವ ಕೆಲಸಕ್ಕೆ ಮುಂದಾಗಿದೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಬಹು ನಿರೀಕ್ಷಿತ ಅಮೆರಿಕ ಪ್ರವಾಸಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಅಮೆರಿಕ ಸರ್ಕಾರದ ಈ ಪ್ರಕ್ರಿಯೆ ಪಾಕಿಸ್ತಾನವನ್ನು ತೀವ್ರ ಮುಜುಗರಕ್ಕೀಡು ಮಾಡಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಅಮೆರಿಕಕ್ಕೆ ತೆರಳಲಿದ್ದು, ಈ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್'ರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.