ಲಂಡನ್, ಜು 24 (Daijiworld News/RD): ಬ್ರಿಟನ್ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದೊಳಗೆ ನೂತನ ಪ್ರಧಾನಿಗಾಗಿ ಪೈಪೋಟಿ ನಡೆದಿದ್ದು, ಇದರಲ್ಲಿ ಮಾಜಿ ವಿದೇಶಾಂಗ ಕಾರ್ಯದರ್ಶಿ ಬೋರಿಸ್ ಜಾನ್ಸನ್ ಗೆಲುವು ಸಾಧಿಸುವ ಮೂಲಕ ಬ್ರಿಟನ್ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಪ್ರಧಾನಿ ಥೆರೆಸಾ ಮೇ ಅವರು ಉತ್ತರಾಧಿಕಾರಿ ಪಟ್ಟದಿಂದ ನಿರ್ಗಮನಗೊಂಡು ಇಂದು ನೂತನ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬ್ರಿಟನ್ನ ಐರೋಪ್ಯ ಒಕ್ಕೂಟದಿಂದ ಹೊರ ಬರುವ ಬ್ರೆಕ್ಸಿಟ್ ಇಂಗ್ಲೆಂಡ್ ನಿರ್ಧಾರದ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿತ್ತು. ಇದರಿಂದಾಗಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದೊಳಗೆ ಈ ವಿಚಾರದ ಬಗ್ಗೆ ವಿರೋಧ ಭಾಸವಾಗಿತ್ತು. ಪಕ್ಷದೊಳಗಿನ ಈ ವೈಮನಸ್ಸನ್ನು ನಿವಾರಿಸಲು ವಿಫಲಗೊಂಡ ಹಾಲಿ ಪ್ರಧಾನಿ ಥೆರೆಸಾ ಕಳೆದ ತಿಂಗಳು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು.
ಹಲವು ತಿಂಗಳುಗಳಿಂದ ನಡೆಯುತ್ತಿರುವ ಈ ರಾಜಕೀಯ ಗುದ್ದಾಟವನ್ನು ಅಂತ್ಯಗೊಳಿಸುವ ಅನಿವಾರ್ಯ ಒದಗಿದ್ದು ನೂತನ ಪ್ರಧಾನಿ ಆಯ್ಕೆಯ ಪ್ರಕ್ರಿಯೆ ನಡೆಯಿತು. ಈ ಪ್ರಕ್ರಿಯೆಯಲ್ಲಿ ಹಾಲಿ ವಿದೇಶಾಂಗ ಕಾರ್ಯದರ್ಶಿ ಜೆರೆಮಿ ಹಂಟ್ ಮತ್ತು ವಿದೇಶಾಂಗ ಕಾರ್ಯದರ್ಶಿ ಬೋರಿಸ್ ಜಾನ್ಸನ್ ಸ್ಪರ್ಧೆಯಲ್ಲಿ ಪೈಪೋಟಿ ನೀಡಿದ್ದರು. ಈ ಒಂದು ಪೈಪೋಟಿಯಲ್ಲಿ ಅತೀ ಹೆಚ್ಚು ಮತಗಳನ್ನು ಬೋರಿಸ್ ಗಳಿಸುವ ಮೂಲಕ ಆಯ್ಕೆಯಾದರು. ಇದರೊಂದಿಗೆ ಹಲವು ತಿಂಗಳುಗಳಿಂದ ಕಾಣಿಸಿದ್ದ ಬ್ರಿಟನ್ ರಾಜಕೀಯ ಗೊಂದಲ ಅಂತ್ಯಗೊಂಡಿದೆ.
ಬ್ರಿಟನ್ನ ನೂತನ ಪ್ರಧಾನಿಯಾದ ಜಾನ್ಸನ್, ನಾನು ಭಾರತದ ಮಾಜಿ ಅಳಿಯ ಎಂದಿದ್ದರು. ಭಾರತೀಯ ಮೂಲದ ಅಮ್ಮ ಮತ್ತು ಬ್ರಿಟಿಷ್ ತಂದೆಗೆ ಜನಿಸಿದ ಮರಿನಾ ವೀಲರ್ಸ್ ಅವರನ್ನು ಮದುವೆಯಾಗಿದ್ದ ಅವರು, ''ನಾನು ಭಾರತದ ಅಳಿಯ,'' ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಇದಾಗಿ ವೀಲರ್ಸ್ ವಿಚ್ಛೇದನ ನೀಡಿ ದೂರ ಸರಿದ ಬಳಿಕವೂ ಭಾರತದ ಬಗೆಗಿನ ಜಾನ್ಸನ್ ಅಭಿಮಾನ ಕೊಂಚವು ಕಡಿಮೆಯಾಗದೆ, ನಾನು ಭಾರತದ ಮಾಜಿ ಅಳಿಯ ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೂ ಜಾನ್ಸನ್ ಅತ್ಯುತ್ತಮ ಒಡನಾಟವಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಬಾಂಧವ್ಯ ಬೆಳೆಸಲು ಸಹಕಾರಿಯಾಗಲಿದೆ. ಭಾರತ-ಬ್ರಿಟನ್ ದ್ವಿಪಕ್ಷೀಯ ಬಾಂಧವ್ಯ ಇನ್ನೂ ಬಲಗೊಳಿಸಲು ಇದು ನೆರವಾಗಲಿದೆ. ಈಗಾಗಲೇ ಉಭಯ ದೇಶಗಳ ವಾಣಿಜ್ಯ ಸಂಬಂಧ ಸುಧಾರಣೆಯ ಕುರಿತು ಪಕ್ಷದ ಆಪ್ತ ವಲಯದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.